ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮಹಿಳಾ ಸಂಘಟನೆ ವತಿಯಿಂದ ಪ್ರತಿಭಟನೆ

IMG-20210713-WA0015

 

ದಾವಣಗೆರೆ. ದೇಶವನ್ನು ವ್ಯಾಪಿಸಿರುವ ಆರ್ಥಿಕ ಬಿಕ್ಕಟ್ಟು ಮತ್ತು ಕೊರೋನಾ ಮಹಾಮಾರಿಯಿಂದಾಗಿ ಮಹಿಳೆಯರು ಹಾಗೂ ಮಕ್ಕಳನ್ನೊಳಗೊಂಡು ಒಟ್ಟಾರೆ ಇಡೀ ಜನಸಮೂಹ ಸಂಕಷ್ಟದಲ್ಲಿದ್ದಾರೆ ಇ  ಸಂದರ್ಭದಲ್ಲಿ ಎಲ್ಲಾ ಅಗತ್ಯ ವಸ್ತುಗಳ ತೀವ್ರವಾದ ಬೆಲೆ ಏರಿಕೆ ಜನಸಾಮಾನ್ಯರ ಬದುಕನ್ನು ಇನ್ನಷ್ಟು ಜರ್ಝರಿತಗೊಳಿಸುತ್ತಿದೆ. ಅಡುಗೆ ಅನಿಲ (ಎಲ್ ಪಿ ಜಿ) ದರವನ್ನು ಮತ್ತೆ ರೂ.25 ಏರಿಕೆ ಮಾಡಿದ್ದರಿಂದ ಕಳೆದ ಕೆಲವೇ ತಿಂಗಳಲ್ಲಿ 240 ರೂಗಳಷ್ಟು ದುಬಾರಿಯಾಗಿ ರೂ. 840ರ ಸಮೀಪ ಬಂದಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭವನ್ನು ಬಳಸಿಕೊಂಡು  ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ. ಪೆಟ್ರೋಲ್, ಡೀಸೆಲ್ ದರ ಮಿತಿಮೀರುತ್ತಿದೆ. ಅಡುಗೆ ಎಣ್ಣೆ, ಬೇಳೆಕಾಳುಗಳು ತುಟ್ಟಿಯಾಗಿವೆ. ಇದನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಇಂದು ನಗರದ ವಿಭಾಗಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕೋವಿಡ್- 19 ಸಾಂಕ್ರಾಮಿಕ ಹಾಗೂ ಪೂರ್ವ ತಯಾರಿಯಿಲ್ಲದ ಲಾಕ್ ಡೌನ್ ಎಲ್ಲಾ ವಿಭಾಗದ ಮಹಿಳೆಯರನ್ನು ತೀವ್ರತರವಾದ ಅಸಮಾನತೆಗೆ ಹಾಗೂ ಸಂಕಷ್ಟಕ್ಕೆ ತಳ್ಳಿದೆ .ಅಷ್ಟೇ ಅಲ್ಲದೆ ವಿವಿಧ ಅವಶ್ಯಕ ಔಷಧಿಗಳ ಬೆಲೆ ಗಗನಕ್ಕೇರಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಸಾವಿರಾರು ಜನ ಕೊರೊನಾ ಸೋಂಕಿತರು ಕನಿಷ್ಠ ಔಷಧೋಪಚಾರ, ಬೆಡ್, ಆಕ್ಸಿಜನ್ ಸಿಗದೆ ಮೃತಪಟ್ಟರು. ಈ ಕಾರಣದಿಂದಾಗಿ ಅದೆಷ್ಟೋ ಚಿಕ್ಕ ಮಕ್ಕಳು ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾದರು. ಕುಟುಂಬವನ್ನು ಪೋಷಿಸುತ್ತಿದ್ದವರನ್ನು ಕಳೆದುಕೊಂಡ ಹಿರಿಯರು ಹಾಗೂ ಅವರನ್ನೇ ನಂಬಿ ಬದುಕುತ್ತಿದ್ದವರ ಬದುಕು ಇಂದು ಕಗ್ಗತ್ತಲಿನಲ್ಲಿದೆ. ಎರಡನೇ ಅಲೆಗೆ ಯಾವುದೇ ರೀತಿ ಸನ್ನದ್ಧವಾಗದೇ ಇದ್ದ ಸರ್ಕಾರ ಈಗಲಾದರೂ ಯುದ್ಧೋಪಾದಿಯಲ್ಲಿ ಸರಿಯಾದ ಸಿದ್ಧತೆ ನಡೆಸಿ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಿ ಕೋವಿಡ್ ಮೂರನೇ ಅಲೆಯನ್ನು ನಿಭಾಯಿಸಲು ಸಜ್ಜಾಗಬೇಕು ಹಾಗೂ ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕು.

ದೇಶದಾದ್ಯಂತ ಅನೇಕ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿದ್ದು ಧ್ವನಿಯೆತ್ತುವವರ ವಿರುದ್ಧ ಯುಎಪಿಎ ಹಾಗೂ ಇನ್ನಿತರ ಕರಾಳ ಕಾಯ್ದೆಗಳ ಮೂಲಕ ಹೋರಾಟಗಾರರು ಹಾಗೂ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ಅವರನ್ನೆಲ್ಲರನ್ನೂ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಪೆಟ್ರೋಲ್ ,ಡೀಸೆಲ್, ಗ್ಯಾಸ್ ಸಿಲಿಂಡರ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಕೋವಿಡ್ -19 ರ ಮೂರನೇ ಅಲೆಯನ್ನು ಎದುರಿಸಲು ಅವಶ್ಯಕ ಸಿದ್ಧತೆ ಮಾಡಿ ಹಾಗೂ ಎಲ್ಲರಿಗೂ ಉಚಿತ ಲಸಿಕೆ ಯನ್ನು ನೀಡಬೇಕು.ಯುಎಪಿಎ ಮತ್ತು ಇತರ ಸುಳ್ಳು ಆರೋಪಗಳ ಮೇಲೆ ಬಂಧಿಸಿರುವ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕೆಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಜ್ಯೋತಿ ಕುಕ್ಕುವಾಡ, ಉಪಾಧ್ಯಕ್ಷರಾದ ಬನಶ್ರೀ, ಸಂಘಟನಾಕಾರರಾದ ಮಮತ, ಸರಸ್ವತಿ, ಪುಷ್ಪ, ಕಾವ್ಯ ಇನ್ನಿತರರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!