8.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕು ಸ್ಥಾಪನೆ

ದಾವಣಗೆರೆ:ನಗರದ ಗಾಜಿನಮನೆ ಆವರಣದಲ್ಲಿ ಬುಧವಾರ ರೂ. 8.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗುತ್ತಿರುವ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ ರವೀಂದ್ರನಾಥ ಇವರು ರೂ.5 ಕೋಟಿ ವೆಚ್ಚದ ಲೇಸರ್ ಷೋ ಹಾಗೂ ರೂ.3.5 ಕೋಟಿ ವೆಚ್ಚದ ವಿವಿಧ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವರು, ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಮಳೆಯಾಗಿ ಬೆಳೆ ಕೈಗೆ ಬರುವ ಮೂಲಕ ಎಲ್ಲರಲ್ಲೂ ಸಂತಸ ಮೂಡಲಿ ಎಂದು ಹಾರೈಸಿದರು.
ಗಾಜಿನ ಮನೆ ಆವರಣದಲ್ಲಿ ನಿರ್ಮಿಸಿರುವ ಲೇಸರ್ ಷೋ ಪ್ರವಾಸಿಗರಿಗೆ ಮುದ ನೀಡಲಿದೆ. ಗಾಜಿನ ಮನೆ ನೋಡಲು ಬರುವ ಪ್ರವಾಸಿಗರಿಗೆ ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮನವಿ ನೀಡಲಾಗಿದ್ದು, ಅಗತ್ಯ ಅನುದಾನ ನೀಡಲು ಪರಿಶೀಲಿಸಲಾಗುವುದು. ಹಾಗೂ ಇದೊಂದು ಉತ್ತಮ ಪ್ರವಾಸಿ ತಾಣವಾಗಲು ಎಲ್ಲ ರೀತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಇದ್ದರು