ಜಿಎಂಐಟಿ: ಆಕ್ಸೆಂಚರ್ ಸಂದರ್ಶನದಲ್ಲಿ 31 ವಿದ್ಯಾರ್ಥಿಗಳು ಆಯ್ಕೆ

ದಾವಣಗೆರೆ.ಜು.೧೫; ಆಕ್ಸೆಂಚರ್ ಕಂಪನಿಯು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ, ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ, ಇಂಜಿನಿಯರಿಂಗ್ ವಿಭಾಗದ ಕೊನೆಯ ವರ್ಷದ 31 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಂಪನಿಯು ವಾರ್ಷಿಕ 4.5 ಲಕ್ಷ ರೂಗಳನ್ನು ನೀಡಲಿದೆ. ಉದ್ಯೋಗ ಮತ್ತು ತರಬೇತಿ ವಿಭಾಗವು, ಇದುವರೆಗೂ ಒಟ್ಟು 526 ಆಫರ್ ಲೆಟರ್ಸ್ ಸ್ವೀಕರಿಸಿದ್ದು, 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಇನ್ನೂ ಹಲವು ಪ್ರತಿಷ್ಠಿತ ಕಂಪನಿಗಳು ಸಂದರ್ಶನ ನಡೆಸಲಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಉದ್ಯೋಗವಕಾಶಗಳನ್ನು ಒದಗಿಸಿದ ಕೀರ್ತಿ ಜಿಎಂ ತಾಂತ್ರಿಕ ಮಹಾವಿದ್ಯಾಲಯಕ್ಕೆ ದೊರೆಯಲಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗಾಧಿಕಾರಿ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ ವಿಜಯಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಕಂಪನಿಗಳು ಉದ್ಯೋಗವಕಾಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಒದಗಿಸಲಿದ್ದು, ಆ ನಿಟ್ಟಿನಲ್ಲಿ ಕೆಲಸವು ನಡೆದಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಮತ್ತು ತಾಂತ್ರಿಕ ಬುದ್ಧಿಶಕ್ತಿ ಹೆಚ್ಚಿಸಲು 80 ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಇತ್ತೀಚಿಗೆ ಟೈಮ್ಸ್ ಆಫ್ ಇಂಡಿಯಾ ನಡೆಸಿದ ಶಿಕ್ಷಣ ಗುಣಮಟ್ಟದ ಸಮೀಕ್ಷೆಯಲ್ಲಿ ಕಾಲೇಜಿಗೆ 9ನೇ ಶ್ರೇಣಿ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಒದಗಿಸಿರುವ ಸಮೀಕ್ಷೆಯಲ್ಲಿ 12ನೇ ಶ್ರೇಣಿ ಲಭಿಸಿದೆ. ಮಧ್ಯ ಕರ್ನಾಟಕದಲ್ಲೇ ಅತಿ ಹೆಚ್ಚು ಉದ್ಯೋಗವಕಾಶಗಳನ್ನು ನೀಡಿದ ಕೀರ್ತಿ ಕಾಲೇಜಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಈಗಾಗಲೇ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಒದಗಿಸುತ್ತಿದ್ದು, ಬೆಂಗಳೂರಿನ ಅಲ್ಟರಂ ಲೆರೇನ್ ಕಂಪನಿಯು ನಡೆಸಿದ ಸಂದರ್ಶನದಲ್ಲಿ ಗಣಕಯಂತ್ರ ವಿಭಾಗದ, ಆರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಸುಚಿತ್ರ ಹಿರೇಗೌಡರ ಆಯ್ಕೆಯಾಗಿದ್ದಾರೆ. ಈ ಮೂಲಕ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಕಂಪನಿ ಸಂದರ್ಶನಗಳು ಪ್ರಾರಂಭವಾಗಿವೆ ಎಂದು ಸೂಚನೆಯನ್ನು ಕೊಡಲಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಗೆ ಕಾಲೇಜಿನ ಚೇರ್ಮನ್ ಆದ ಜಿ ಎಂ ಲಿಂಗರಾಜು ಮತ್ತು ಆಡಳಿತಾಧಿಕಾರಿ ವೈ ಯು ಸುಭಾಶ್ಚಂದ್ರ ಹೇಳಿದರು.