ಶೈಕ್ಷಣಿಕ ಜೀವನಕ್ಕೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಭದ್ರವಾದ ಬುನಾದಿ

ದಾವಣಗೆರೆ.ಜು.೧೫- ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಜೀವನದ ಒಂದು ತಿರುವು ಎಸ್.ಎಸ್.ಎಲ್.ಸಿ. ಪರೀಕ್ಷೆ. ಮಕ್ಕಳ ಮುಂದಿನ ಶೈಕ್ಷಣಿಕ ಸಾಧನೆಗಳಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯೇ ಮಾನದಂಡ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೆ ಮಾತ್ರ ಮುಂದಿನ ಎಲ್ಲಾ ಸಾಧನೆಗಳಿಗೆ ಭದ್ರವಾದ ಬುನಾದಿ ಅಗುತ್ತದೆ ಎಂದು ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ದಾವಣಗೆರೆಯ ಮಹಿಳಾ ಸೇವಾ ಸಮಾಜದ ಪ್ರೌಢಶಾಲಾ ಸಭಾಂಗಣದಲ್ಲಿ ಸರಳವಾಗಿ ಮಾಸ್ಕ್ಧಾರಣೆ, ಸಾಮಾಜಿಕ ಅಂತರದೊಂದಿಗೆ ನಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ಸಿದ್ಧತಾ ಕಾರ್ಯಾಗಾರದಲ್ಲಿ ಹಾಗೂ ಪರೀಕ್ಷೆ ಪ್ರವೇಶ ಪತ್ರ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ ಕಲಾಕುಂಚ ಸೇರಿದಂತೆ ವಿವಿಧ ಸಂಘಟನೆಗಳಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ವಿವಿಧ ಪ್ರಶಸ್ತಿಗಳು, ಪುರಸ್ಕಾರಗಳ ಬಗ್ಗೆ ವಿವರ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಕಂಚಿಕೆರೆ ಸುಶೀಲಮ್ಮ ಮಾತನಾಡಿ, ಮಕ್ಕಳು ಪರೀಕ್ಷೆ ಭಯಬಿಟ್ಟು ಬದ್ಧತೆಯಿಂದ, ಇಚ್ಛಾಶಕ್ತಿಯಿಂದ ಧೈರ್ಯವಾಗಿ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶದೊಂದಿಗೆ ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಗೆ, ಪೋಷಕರಿಗೆ, ಊರಿಗೆ ಹೆಸರು ತಂದುಕೊಡಿ ಎಂದರು. ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದಾಕ್ಷಾಯಿಣಿ ಆರ್.ರವರು ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಎ.ವಾಮದೇವಪ್ಪ ಮಾತನಾಡಿ, ಪರೀಕ್ಷಾ ಪೂರ್ವಭಾವಿ ತಯಾರಿ ಮಾದರಿ ಪರೀಕ್ಷೆಯನ್ನು ನಡೆಸುತ್ತಿರುವುದು ಮಕ್ಕಳ ಭವಿಷ್ಯಕ್ಕೆ ಸಹಕಾರಿ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನೀಲಗುಂದ ಜಯಮ್ಮ ಸೇರಿದಂತೆ ಪದಾಧಿಕಾರಿಗಳಾದ ಶ್ರೀಮತಿ ರುದ್ರಾಂಬ ಕೆ.ಎಸ್., ಶ್ರೀಮತಿ ಸುಮಾ ಸದಾನಂದ, ಶ್ರೀಮತಿ ಪುಷ್ಪಾ ಶಿವಕುಮಾರ್, ಶ್ರೀಮತಿ ನೀಲಮ್ಮ, ಶ್ರೀಮತಿ ಚನ್ನಮ್ಮ ಮಹೇಶ್ವರಯ್ಯ ಪದವಿ ಪೂರ್ವ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎಸ್.ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದು ಮಕ್ಕಳಿಗೆ ಕರ್ನಾಟಕ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಪೂರ್ಣ ಪ್ರಮಾಣದ ಸಾಮಾಜಿಕ ಕಾಳಜಿಯಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಿದ್ಧತೆಯಿಂದ ನಡೆಯುವ ಪರೀಕ್ಷೆ ಎದುರಿಸುವ ಸೂಕ್ತ ಮಾರ್ಗದರ್ಶನದೊಂದಿಗೆ ಮಕ್ಕಳ ಮುಂದಿನ ಭವ್ಯ ಭವಿಷ್ಯಕ್ಕೆ ಎಲ್ಲಾ ಹಂತದಲ್ಲೂ ನಾವುಗಳು ನಿಮ್ಮೊಂದಿಗೆ ಇರುತ್ತೇವೆ ಎಂದು ಮಕ್ಕಳಿಗೆ ಧೈರ್ಯ ತುಂಬಿದರು.
ಜುಲೈ 19 ಮತ್ತು 22 ರಂದು ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪ್ರವೇಶಪತ್ರ ವಿತರಿಸಲಾಯಿತು. ಪ್ರಾರ್ಥನೆ ಕುಮಾರಿ ಆರತಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಶಿಕ್ಷಕಿ ಶ್ರೀಮತಿ ಭೋಜಮ್ಮ ಸ್ವಾಗತಿಸಿದರು, ಶಿಕ್ಷಕರಾದ ರಾಜಪ್ಪ ಎಸ್.ಪಿ. ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಕರಾದ ಮರುಳಸಿದ್ದಪ್ಪ ಎನ್. ಕೊನೆಯಲ್ಲಿ ವಂದಿಸಿದರು.