ಬಿಜೆಪಿ, ಜೆಡಿಎಸ್ ಸೇರಿದ್ದ ಹಲವರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ – ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ
ದಾವಣಗೆರೆ: ಕಾಂಗ್ರೆಸ್ ನಿಂದ ಇತರೆ ಪಕ್ಷಗಳಿಗೆ ಸೇರಿರುವವರಿಗೆ ‘ಘರ್ ವಾಪಸಿ’ ಮೂಲಕ ಕರೆ ನೀಡಲಾಗಿದ್ದು, ಈಗಾಗಲೇ ಬಿಜೆಪಿ, ಜೆಡಿಎಸ್ ಸೇರಿದ್ದ ಹಲವರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದ್ದಾರೆ.
ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದ 14 ಶಾಸಕರಿಗೆ ‘ಘರ್ ವಾಪಸಿ’ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಬಿಜೆಪಿ, ಜೆಡಿಎಸ್‌ನಿಂದ ಹಲವರು ಕಾಂಗ್ರೆಸ್‌ಗೆ ಸೇರಲು ಉತ್ಸುಕರಾಗಿದ್ದು, ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಯಾವುದೇ ರಾಜಕೀಯ ಸ್ವಾರ್ಥದಿಂದ ಸೂರಗೊಂಡನಕೊಪ್ಪದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿಲ್ಲ. ಮತ ಬೇಟೆಗಾಗಿಯಲ್ಲ. ತಳ ಸಮುದಾಯದ ಜನರ ಸಂಕಷ್ಟ ವಿಚಾರಣೆಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಮುಂದಿನ ಸಿಎಂ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ನಡೆದು ಕಾಂಗ್ರೆಸ್ ಬಹುಮತ ಬರಲಿ ಆನಂತರ ಕಾಂಗ್ರೆಸ್ ನಿಂದ ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಪ್ರಶ್ನೆಯಿಂದ ಜಾರಿಕೊಂಡರು.
ಕಾಂಗ್ರೆಸ್ ಕೋವಿಡ್ ಸಂಕಷ್ಟದಲ್ಲಿ ಸ್ಪಂದಿಸಲಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಲಾಕ್ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ನಾವು ಹೊರಗೆ ಬಂದಿರಲಿಲ್ಲ. ಆದರೂ ಸಹ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇವೆ ಎಂದರು.
ಕರೋನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಅನೇಕ ಸೋಂಕಿತರು ಬೆಡ್, ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ. ಈಗ ಅಗತ್ಯ ಇರುವಷ್ಟು ಲಸಿಕೆ ಸಿಗುತ್ತಿಲ್ಲ ಹರಿಹಾಯ್ದರು.