ಖಾಸಗಿ ವಿಮಾ ಕಂಪನಿಯಿಂದ ವಂಚನೆ ಆರೋಪ: ನ್ಯಾಯಕ್ಕಾಗಿ ಗ್ರಾಹಕರ ವೇದಿಕೆ ಬಾಗಿಲು ತಟ್ಟೊದಾಗಿ ಎಚ್ಚರಿಕೆ

ದಾವಣಗೆರೆ: ಐಸಿಐಸಿಐ ಲ್ಯಾಂಬೋರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಯು ವಂಚನೆ ತಮಗೆ ಮಾಡಿದೆ ಎಂದು ಎಂ.ಬಿ. ಯಶವಂತಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಮ್ಮ ತಂದೆ ಎಂ.ಟಿ. ಬಸವನಗೌಡ ಅವರು ಐಸಿಐಸಿಐ ಬ್ಯಾಂಕಿನಲ್ಲಿ 1.30 ಕೋಟಿ ರೂ., ಮೆಷಿನರಿ ಸಾಲವನ್ನು ಪಡೆದಿದ್ದರು. ಅದಕ್ಕೆ ವಿಮೆ ಮಾಡಲಾಗಿತ್ತು. ಕೋವಿಡ್ನಿಂದಾಗಿ ಅವರು ಮೃತರಾಗಿದ್ದು, ಅಲ್ಲಿಗಾಗಲೇ 70 ಲಕ್ಷ ಸಾಲವನ್ನು ತೀರಿಸಲಾಗಿದ್ದು, ಉಳಿದ ಸಾಲಕ್ಕೆ ವಿಮೆ ಇರುವುದರಿಂದ ಅದನ್ನು ವಜಾಗೊಳಿಸುವಂತೆ ಪತ್ರ ಬರೆದರೆ ಕಂಪನಿಯವರು ಕೋವಿಡ್ಗೆ ವಿಮೆ ಅನ್ವಯವಾಗುವುದಿಲ್ಲ. ಹಾಗಾಗಿ, ಉಳಿದ ಸಾಲದ ಕಂತುಗಳನ್ನು ಕಟ್ಟಲೇಬೇಕಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ಸಾಲ ಪಡೆಯುವ ವೇಳೆ ಸಂಬಂಧಿಸಿದ ವ್ಯಕ್ತಿಯು ಸಹಜವಲ್ಲದ ಕಾರಣದಿಂದ ಮೃತನಾದರೆ ವಿಮೆ ಅನ್ವಯಿಸುತ್ತದೆ ಎನ್ನುವ ನಿಯಮವಿರುತ್ತದೆ. ಆದರೆ, ಕಂಪನಿಯವರು ಕೋವಿಡ್ ಇದಕ್ಕೆ ಅನ್ವಯಿಸುವುದಿಲ್ಲ ಎನ್ನುತ್ತಿದ್ದಾರೆ. ಸರ್ಕಾರವೇ ಕೋವಿಡ್ ವಿಪತ್ತು ಪರಿಹಾರ ಘೋಷಿಸಿದೆ. ಸಾಕಷ್ಟು ಗ್ರಾಹಕರು ಈ ಕಂಪನಿಯಿಂದ ವಂಚನೆ ಆಗುತ್ತಿದೆ ಎಂದು ಆರೋಪಿಸಿದರು.
ಕಂಪನಿಯವರು ನ್ಯಾಯ ಒದಗಿಸಿಕೊಡದಿದ್ದಲ್ಲಿ ತಾವು ಗ್ರಾಹಕರ ವೇದಿಕೆಗೆ ದೂರು ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಿದ್ದೇಶ್ ಇದ್ದರು.