ಆರ್ ಟಿ ಐ ಕಾರ್ಯಕರ್ತ ಶ್ರೀಧರ್ ಹತ್ಯೆಗೆ ಸುಪಾರಿ ನೀಡಿದ್ರಾ ಶಾಸಕ ಪಿಟಿಪಿ ಪುತ್ರ.?

ದಾವಣಗೆರೆ: ಇತ್ತೀಚಿಗಷ್ಟೆ ಬರ್ಬರವಾಗಿ ಕೊಲೆಯಾಗಿದ್ದ ಹರಪನಹಳ್ಳಿಯ ಆರ್‌ಟಿಐ ಕಾರ್ಯಕರ್ತ ಬಿ. ಶ್ರೀಧರ ಹತ್ಯೆಯ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು.
ಈ ಬಗ್ಗೆ ಶ್ರೀಧರ್ ಪತ್ನಿ ವಾಲ್ಮೀಕಿ ಅವರ ಕೇರಿಯಲ್ಲೇ ವಾಸವಿರುವ ವಾಗೀಶ್ ಸೇರಿದಂತೆ ನಾಲ್ವರು ಸೇರಿ ದುರುದ್ದೇಶದಿಂದ ತಮ್ಮ ಪತಿ ಶ್ರೀಧರ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಲೆಯಾದ ಶ್ರೀಧರ್ ಅವರು ತಮಗೆ ಕರೆ ಮಾಡಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಪುತ್ರ ಭರತ್ ಮತ್ತು ಹೆಚ್.ಕೆ ಹಾಲೇಶ ಮತ್ತು ಅವರ ಪುತ್ರನ ವಿರುದ್ಧ ಕೇಸು ದಾಖಲಿಸಿದ್ದು, ಈ ವಿಚಾರವಾಗಿ ಹೊಲದ ವಿಷಯದ ದೂರು ದಾಖಲಿಸಿರುವುದರಿಂದ ಈ ಎಲ್ಲರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅದೇ ಕಾರಣದಿಂದ ತಮ್ಮ ಪತಿ ಅಂದು ಹೊರಗೆಲ್ಲೂ ಹೋಗಿರಲಿಲ್ಲ. ಆದರೆ, ಜು.15 ರಂದು ಸಂಜೆ 7.15 ಗಂಟೆ ಸುಮಾರಿಗೆ ಪತಿ ಶ್ರೀಧರನಿಗೆ ಎ.ಡಿ.ಬಿ ಕಾಲೇಜ್ ಆವರಣದಲ್ಲಿರುವ ಹೋಟೆಲ್ ಬಳಿ ಹೊಡೆದು ಹಾಕಿರುವ ಬಗ್ಗೆ ಸುದ್ದಿ ತಿಳಿಯಿತು.
ಅಲ್ಲಿ ಹೋಗಿ ವಿಚಾರಿಸಿದಾಗ ಆರ್.ವಾಗೀಶ ಮತ್ತು ಅವರೊಂದಿಗೆ ನಾಲ್ವರು ಕಬ್ಬಿಣದ ರಾಡು ಮತ್ತು ಸಿಮೆಂಟ್ ಇಟ್ಟಿಗೆಯಿಂದ ತಮ್ಮ ಪತಿಗೆ ಹೊಡೆದಿದ್ದಾರೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ಅವರು ದೂರಿನಲ್ಲಿ ವಿವರಣೆ ನೀಡಿದ್ದಾರೆ.