ಶೀಘ್ರದಲ್ಲೇ ಸ್ಮಾರ್ಟ್ ಗೆ ಅಡ್ಡವಾಗಿರುವ ಹಂದಿಗಳ ಗಡಿಪಾರು: ಜಿಲ್ಲಾಧಿಕಾರಿ ಬೀಳಗಿ

IMG-20210720-WA0005

ದಾವಣಗೆರೆ: ಸ್ಮಾರ್ಟ್‌ಸಿಟಿ ಅಡ್ಡವಾಗಿರುವ ಹಂದಿಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಹಂದಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು, ಇದಕ್ಕಾಗಿ ಅಗತ್ಯ ಭೂಮಿಯನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಹಂದಿಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ತೀವ್ರವಾಗಿರುವ ಹಂದಿಗಳ ಹಾವಳಿಯನ್ನು ಶೀಘ್ರ ನಿವಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರು. ಅಲ್ಲದೆ ಸಂಸದರು ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಂದಲೂ ಒತ್ತಾಯವಿದೆ ಎಂದರು.

ಹಂದಿ ಹಾವಳಿಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಸ್ತೆಗಳಲ್ಲಿ ಬಿಡಾಡಿ ಹಂದಿಗಳ ಓಡಾಟದಿಂದಾಗಿ ಸಾಕಷ್ಟು ಅಪಘಾತಗಳೂ ಸಂಭವಿಸಿವೆ. ಅಲ್ಲಲ್ಲಿ ಮಕ್ಕಳ ಮೇಲೂ ಹಂದಿಗಳು ದಾಳಿ ಮಾಡಿ ಗಾಯಗೊಳಿಸಿರುವ ಬಗ್ಗೆ ಸಾರ್ವಜನಿಕರಿಂದಲೂ ಬಹಳಷ್ಟು ದೂರುಗಳಿವೆ. ಹೀಗಾಗಿ ಹಂದಿಗಳ ಹಾವಳಿಯನ್ನು ತಪ್ಪಿಸಲು ವರಾಹ ಶಾಲೆ ನಿರ್ಮಾಣಕ್ಕೆ ಜಿಲ್ಲಾಡಳಿತ ಅಂತಿಮ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ಈ ಬಗ್ಗೆ ಚರ್ಚಿಸಲು ಹಂದಿ ಮಾಲೀಕರ ಸಂಘದವರಿಗೆ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಬಂದಿಲ್ಲ. ಹೀಗಾಗಿ ಜಿಲ್ಲಾಡಳಿತದಿಂದಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ವರಾಹ ಶಾಲೆ ನಿರ್ಮಾಣಕ್ಕೆ ಕೆಲವೆಡೆ ಭೂಮಿ ಗುರುತಿಸಲಾಗಿದ್ದು, ಮಹಾನಗರಪಾಲಿಕೆಗೆ ಭೂಮಿ ಹಸ್ತಾಂತರಿಸುವ ಕಾರ್ಯ ತ್ವರಿತಗೊಳಿಸಲಾಗುವುದು. ಪಾಲಿಕೆಯಿಂದ ಸುತ್ತಲೂ ಗುಣಮಟ್ಟದ ಕಾಂಪೌಂಡ್ ನಿರ್ಮಿಸಿ, ನಗರದಲ್ಲಿ ಸಂಗ್ರಹಿಸಲಾಗುವ ಹಸಿ ಕಸವನ್ನು ವರಾಹಶಾಲೆಗೆ ಒದಗಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಾಲಿಕೆಗೆ ಕಸ ಸಾಗಾಣಿಕೆಗೆ ಸಂಬಂಧಿಸಿದ 13 ಹೊಸ ಆಟೋ ಟಿಪ್ಪರ್‌ಗಳನ್ನು ಖರೀದಿಸಲಾಗಿದ್ದು, ಹಸಿ ಕಸ ಸಾಗಾಟಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದರು.
ವರಾಹಶಾಲೆಯ ಸುತ್ತಮುತ್ತಲಿನ ಜನ ಅಥವಾ ಹೊಲ, ಜಮೀನುಗಳಿಗೆ ಯಾವುದೇ ತೊಂದರೆಯಾಗದಂತೆ ಮಹಾನಗರಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಂದಿ ಮಾಲೀಕರು ಕೂಡ ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಕ್ಕೆ ಸಹಕಾರ ನೀಡಬೇಕು.

ವರಾಹಶಾಲೆ ನಿರ್ಮಿಸಿದ ಬಳಿಕ ಹಂದಿಗಳ ಸ್ಥಳಾಂತರಕ್ಕೆ ಮಾಲೀಕರುಗಳಿಗೆ ಸಮಯ ನಿಗದಿಪಡಿಸಲಾಗುವುದು. ನಿಗದಿತ ಕಾಲಮಿತಿಯೊಳಗೆ ನಗರ ವ್ಯಾಪ್ತಿಯಲ್ಲಿನ ಎಲ್ಲ ಹಂದಿಗಳನ್ನು ವರಾಹಶಾಲೆಗೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ, ನಗರದಲ್ಲಿ ಕಂಡುಬರುವ ಹಂದಿಗಳನ್ನು ಪಾಲಿಕೆಯಿಂದಲೇ ಹಿಡಿದು, ಮಾರಾಟ ಮಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಮೇಯರ್ ಎಸ್.ಟಿ. ವೀರೇಶ್ ಅವರು ಮಾತನಾಡಿ, ಹಂದಿಗಳ ಹಾವಳಿ ಸಮಸ್ಯೆ ಸುಮಾರು 2 ರಿಂದ 3 ದಶಕಗಳಿಂದಲೂ ಇದೆ. ವರಾಹ ಶಾಲೆ ನಿರ್ಮಾಣವಾಗಬೇಕೆಂಬುದು ಈ ಹಿಂದೆ ನಾವೇ ಒತ್ತಾಯಿಸಿದ್ದೆವು. ಇದೀಗ ಜಿಲ್ಲಾಡಳಿತ ಹಂದಿಗಳ ಸ್ಥಳಾಂತರಕ್ಕೆ ಅಂತಿಮ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿರುವ ಇಂತಹ ಸಂದರ್ಭದಲ್ಲಿಯೇ ವರಾಹಶಾಲೆ ನಿರ್ಮಾಣಕ್ಕೆ ನಿರ್ಧರಿಸುವುದು ಸೂಕ್ತವಾಗಿದೆ.
ಕೆಲವರಿಂದ ಇದಕ್ಕೆ ಆಕ್ಷೇಪಣೆಗಳು ಬಂದರೂ, ಅವುಗಳನ್ನು ನಿವಾರಿಸಿ, ಮನವೊಲಿಸಿ ಅನುಷ್ಠಾನಕ್ಕೆ ತರಲೇಬೇಕು. ವರಾಹಶಾಲೆಗೆ ಭೂಮಿ ನಿಗದಿಪಡಿಸುವಾಗ ಜನವಸತಿ ಪ್ರದೇಶದಿಂದ ದೂರವಿದ್ದರೆ ಒಳಿತು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ನಗರದಲ್ಲಿ ಹಂದಿಗಳ ಹಾವಳಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ನಗರದ ರಸ್ತೆಗಳಲ್ಲಿ ಹಂದಿಗಳ ಓಡಾಟದಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದು, ಇದರ ಗಂಭೀರತೆಗೆ ನಿದರ್ಶನವಾಗಿದೆ. ವರಾಹಶಾಲೆ ನಿರ್ಮಿಸುವಾಗ ಕಾಂಪೌಂಡ್ ಕನಿಷ್ಟ 10 ಅಡಿ ಎತ್ತರವಿರಬೇಕು, ಅಲ್ಲದೆ ಅದು ಗುಣಮಟ್ಟದ್ದಾಗಿರಬೇಕು.

ಹಂದಿಗಳ ಓಡಾಟಕ್ಕೆ ಸಮರ್ಪಕವಾದ ಸ್ಥಳಾವಕಾಶ ಇರಬೇಕು. ವರಾಹಶಾಲೆ ಬಳಿ ವಾಸನೆ ಬರುತ್ತದೆ ಎಂಬ ಬಗ್ಗೆ ಆಕ್ಷೇಪಣೆಗಳಿರುತ್ತವೆ. ಹೀಗಾಗಿ ಹಂದಿಗಳ ಸಾಕಾಣಿಕೆಯಲ್ಲಿ ವಾಸನೆ ಬಾರದಂತೆ ವಿದೇಶಗಳಲ್ಲಿ ಕೈಗೊಂಡಿರುವ ವಿಧಾನಗಳನ್ನು ಅರಿತು, ಇಂತಹ ವಿಧಾನಗಳನ್ನು ಇಲ್ಲಿಯೂ ಅನುಸರಿಸಿದಲ್ಲಿ ವಾಸನೆಯ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!