ಬಿ ಎಸ್ ವೈ ಪರ ನಿಂತ ಶ್ರೀ ಶೈಲ ಪೀಠ: ಸಿಎಂ ಸ್ಥಾನದಿಂದ ಹಿಂದೆ ಸರಿದರೆ ಬಿಜೆಪಿಗೆ ತೊಂದರೆ.

IMG-20210720-WA0013

 

ದಾವಣಗೆರೆ: ಎಲ್ಲಾ ವರ್ಗದ ಜನಗಳ ಪರವಾಗಿ ಕೆಲಸ ಮಾಡಿರುವ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಹಿಂದೆ ಸರಿದರೆ, ಅಥವಾ ಅವರನ್ನು ಸರಿಸುವ ಪ್ರಕ್ರಿಯೆ ನಡೆದರೆ ಬಿಜೆಪಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ‌ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಹರಿದಾಡುತ್ತಿವೆ. ಸಿಎಂ ಯಡಿಯೂರಪ್ಪ ಬಿಜೆಪಿಯನ್ನು ಕಟ್ಟಿಬೆಳೆಸಿ ಅಧಿಕಾರಕ್ಕೆ ತರಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಅವರನ್ನು ಪದಚ್ಯುತಗೊಳಿಸಿದ್ದೇ ಆದಲ್ಲಿ ಬಿಜೆಪಿಗೆ ತೊಂದರೆ ಎದುರಾಗುವಲ್ಲಿ ಯಾವುದೇ ಸಂಶಯವೂ ಇಲ್ಲ ಎಂದರು.

ಕರೋನಾದ ಇಂತಹ ಸಂದರ್ಭದಲ್ಲೂ ಯಡಿಯೂರಪ್ಪ ಅವರ ವಯಸ್ಸಿಗೆ ಮೀರಿದ ಕೆಲಸ ಮಾಡುತ್ತಿದ್ದಾರೆ. ಜನರು ಕೂಡ ಅವರನ್ನು ಪ್ರಶ್ನಾತೀತ ನಾಯಕರೆಂದು ಬೆಂಬಲಿಸಿದ್ದು, ಎಲ್ಲಾ ಚುನಾವಣೆಗಳಲ್ಲಿ ರಾಜ್ಯದ ಜನ ಯಡಿಯೂರಪ್ಪಗೆ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಎಲ್ಲಾ ಜನಾಂಗದವರಿಗೆ ನ್ಯಾಯ ದೊರಕಿಸಿಕೊಟ್ಟಿರುವ ಕೀರ್ತಿ ಬಿಎಸ್‌ವೈ ಅವರದ್ದು, ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಎಲ್ಲಾ ಜನಾಂಗದವರು ಅವರ ಪರವಾಗಿ ನಿಲ್ಲುತ್ತಾರೆ. ಅಲ್ಲದೇ ಶ್ರೀಶೈಲ ಮಠ ಸ್ಪಷ್ಟವಾಗಿ ಅವರ ಬೆನ್ನಿಗೆ ಇದೆ ಜತೆಗೆ ಪಂಚಪೀಠಗಳು ಕೂಡ ಬಿಎಸ್‌ವೈ ಪರವಾಗಿ ನಿಲ್ಲುತ್ತವೆ ಎಂದು ತಿಳಿಸಿದರು.

ಜನಾಭಿಮತ ಬಿಎಸ್‌ ಯಡಿಯೂರಪ್ಪ ಅವರ ಪರವಾಗಿದ್ದು, ಕೇಂದ್ರ ಸರ್ಕಾರ, ಹೈಕಮಾಂಡ್ ಅವರನ್ನ ಗೌರವಯುತವಾಗಿ ನಡೆಸಿಕೊಳ್ಳಬೇಕು.‌ ಪ್ರಧಾನಿ ಮೋದಿ ಅವರ ಬಗ್ಗೆ ದೇಶದಲ್ಲಿ ಇರುವ ಒಳ್ಳೆಯ ಅಭಿಪ್ರಾಯದಂತೆ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗಿದೆ ಎಂದರು.

ನಾವು ಇನ್ನೂ ಯಡಿಯೂರಪ್ಪ ಅವರೊಂದಿಗೆ ಮಾತಕತೆ ನಡೆಸಿಲ್ಲ. ರಾಜಕೀಯ ಬೆಳವಣಿಗೆ ಬಗ್ಗೆ ಸಮಾನ ಪೀಠಾಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತೇವೆ. ನಾಳೆಯೇ ಕಾರ್ಯನಿಮಿತ್ತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಬಿಎಸ್ ವೈ ಜತೆ ಮಾತನಾಡುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!