Exclusive: ಸಿಎಂ ಪಟ್ಟಕ್ಕೆ ಅರವಿಂದ್ ಬೆಲ್ಲದ್ ಪರ ಲಿಂಗಾಯತ ಸ್ವಾಮೀಜಿಗಳ ಚಿತ್ತ

IMG-20210721-WA0013

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದೆಡೆ ಲಿಂಗಾಯತ ಸಮುದಾಯ, ಮತ್ತೊಂದೆಡೆ ವಿವಿಧ ಮಠಾಧೀಶರುಗಳು ಬಿಎಸ್ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದು, ಹಾಗೊಂದು ವೇಳೆ ಬಿಜೆಪಿಯ ವರಿಷ್ಠರು ನಾಯಕತ್ವ ಬದಲಾವಣೆ ಮಾಡಲೇಬೇಕೆಂದಾದರೆ ‘ವೀರಶೈವ ಲಿಂಗಾಯತ’ ಸಮುದಾಯದ ಬಲಿಷ್ಠ ನಾಯಕನನ್ನೆ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ.

ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೆ ಇಡೀ ವೀರಶೈವ ಸಮುದಾಯವೇ ಸಿಡಿದೆದ್ದಿದ್ದು, ಸಿಎಂ ಬದಲಾವಣೆ ಮಾಡುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೇ ಕೇಸರಿ ಪಾಳಯದಲ್ಲಿ ತೀವ್ರ ಗೊಂದಲವನ್ನುಂಟು ಮಾಡಿದೆ.

ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ವಿವಿಧ ಧಾರ್ಮಿಕ ಮುಖಂಡರು ಬಿಎಸ್ ವೈ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶ್ರೀಶೈಲ ಮಠದ ಚನ್ನಸಿದ್ಧರಾಮ ಸ್ವಾಮೀಜಿ, ಸಾಣೇಹಳ್ಳಿ ಶ್ರೀ, ಚಿತ್ರದುರ್ಗ ಮುರುಘಾ‌ ಶರಣರು, ರಂಭಾಪುರಿ ಶ್ರೀಗಳು ಹೀಗೆ ಸ್ವಾಮೀಜಿಗಳ ಸಮೂಹ ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಿದರೆ ನಾವು ಸಹಿಸಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ನೀಡಿದರು.

ಒಂದು ವೇಳೆ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಲಿಂಗಾಯತರನ್ನೇ ಸಿಎಂ ಮಾಡಿಸಬೇಕೆಂಬ ಒಕ್ಕೊರಲ ಅಭಿಪ್ರಾಯ ರವಾನೆಯಾಗುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಕೊಳದ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಸಿಎಂ ಬದಲಾಯಿಸಿದ್ದೇ ಆದಲ್ಲಿ ಲಿಂಗಾಯತ ಶಾಸಕ ಅರವಿಂದ ಬೆಲ್ಲದ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಬಿಜೆಪಿ ಹೈಕಮಾಂಡ್‌ಗೆ ಸಲಹೆ ಮಾಡಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ವಿಚಾರದಲ್ಲಿ ನಾವು ಯಾರ ಪರವೂ ಇಲ್ಲ. ಯಾರ ವಿರುದ್ದವೂ ಇಲ್ಲ ಎಂದಿರುವ ಶ್ರೀಗಳು, ನಾಯಕತ್ವ ಬದಲಾವಣೆಯಾಗುವುದಾದರೆ ಲಿಂಗಾಯತರಿಗೆ ಮಣೆ ಹಾಕಬೇಕು. ಅರವಿಂದ್ ಬೆಲ್ಲದ್ ಅಥವಾ ಬೇರೆ ಸಮರ್ಥರನ್ನು ಸಿಎಂ ಮಾಡಲಿ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!