ಶ್ರೀ ಪ್ಲವನಾಮ ಸಂವತ್ಸರ ಬಗ್ಗೆ ಶಾಸ್ತ್ರದಲ್ಲಿ ಹೇಳುವುದೇನು ಇದನ್ನ ಓದಿ 👇

IMG-20210413-WA0018

 

*ಎಲ್ಲರಿಗೂ ಶ್ರೀ ಪ್ಲವನಾಮ* *ಸಂವತ್ಸರದ* 
*ಮತ್ತು ಯುಗಾದಿ ಹಬ್ಬದಹಾರ್ದಿಕ ಶುಭಾಶಯಗಳು*

*ಪ್ಲವ* ಎಂದರೆ ದೋಣಿ, ಹರಿಗೋಲು (ತೆಪ್ಪ) ಅಥವಾ ಹಡಗು. ಭವ (ಸಂಸಾರ) ಸಾಗರವನ್ನು ದಾಟಿಸುವ ದೇವರನ್ನೂ ಸಹ *ಪ್ಲವ* ಎಂದು ಕರೆಯಲಾಗುತ್ತದೆ.

ಕಳೆದ ವರ್ಷ ಶಾರ್ವರಿ (ಕತ್ತಲು) ಎಂಬ ದೇವತೆಯ ಹೆಸರಿನ ಸಂವತ್ಸರ ಸಾಕಷ್ಟು ಜನರ ಜೀವನದಲ್ಲಿ ಕತ್ತಲು ತುಂಬಿತ್ತು. ಕೊರೋನಾ ಎಂಬ ರೋಗದಿಂದ ಜನರು ಹೈರಾಣಾಗಿದ್ದರು. ಇದೊಂದು ರೀತಿಯ ಭಯ ಸಾಗರವೇ ಹೌದು. ಈ ನೂತನ ವರ್ಷದಲ್ಲಿ ಶ್ರೀಹರಿ *ಪ್ಲವ* ವೆಂಬ ಸಂವತ್ಸರದ ಹಡಗಿನಲ್ಲಿ ನಮ್ಮನ್ನು ಕೂರಿಸಿ, ಕೊರೋನಾ ಎಂಬ ರೋಗ ಹಾಗೂ ಕಷ್ಟಗಳಿಂದ ಕೂಡಿದ ಸಂಸಾರವೆಂಬ ಭವ ಸಾಗರವನ್ನು ಧಾಟಿಸಿ ದಡ ಸೇರಿಸಲಿ.ಪ್ಲವನಾಮ ಸಂವತ್ಸರ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ. ನಮ್ಮ ಜೀವನದಲ್ಲಿ ನರಹರಿಯು *ಪ್ಲವ* ನಾಗಿ ಆರೋಗ್ಯದ ಜತೆ ಸುಖ, ಸಂತೋಷ ಸಂಪತ್ತನ್ನು ಕರುಣಿಸಲಿ. ಈ ಸಂವತ್ಸರದಲಿ ಉತ್ತಮ ಮಳೆಯಾಗಿ ಇಳೆ ತಣಿದು ಸಸ್ಯ ಶ್ಯಾಮಲೆಯಾಗಲಿ. ಗೋ ಸಂಪತ್ತು ಹೆಚ್ಚಲಿ, ಚಂದನ ಅಗರು ವೃದ್ಧಿಸಲಿ.

ಪಾಂಡಿತ್ಯ ಪ್ರವರ್ಧಮಾನಕ್ಕೆ ಬರಲಿ. ಕಷ್ಟ ನಷ್ಟದಲ್ಲಿರುವ ಜನರ ಅನಿಷ್ಟ ನಿವಾರಣೆಯಾಗಲಿ. ರೋಗ ರುಜಿನ ತೊಲಗಲಿ, ಸರ್ವರೂ ಆರೋಗ್ಯವಂತರಾಗಲಿ. *ನಿರ್ದೋಷನಾದ ಶ್ರೀಹರಿ ಸಕಲ ಜನರಲ್ಲಿನ ದೋಷ ನಿರ್ದೋಷಗೊಳಿಸಲಿ.*ಯುಗಾದಿ*ಪುರಾಣದ ಪ್ರಕಾರ ಬ್ರಹ್ಮದೇವರು ಮೊದಲನೇ ಯುಗವಾದ ಕೃತ ಯುಗವನ್ನು ಆರಂಭಿಸಿದ ದಿನ. ಹಾಗಾಗಿ ಈ ಯುಗಾದಿ ದಿನದಿಂದಲೇ ಚಾಂದ್ರಮಾನ ಪದ್ಧತಿಯ ಕಾಲಗಣನೆ ಆರಂಭವಾಗುತ್ತದೆ. ಚಂದ್ರ ಭೂಮಿಯ ಸುತ್ತ ಸುತ್ತುವ ವೇಗದ ಗತಿಯನ್ನು ಆಧರಿಸಿ ಚಾಂದ್ರಮಾನ ಪದ್ಧತಿಯನ್ನು ರೂಪಿಸಲಾಗಿದೆ.

ಚಾಂದ್ರಮಾನ ಪದ್ಧತಿಯ ಪ್ರಕಾರ ಒಂದು ವರ್ಷದಲ್ಲಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ , ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಹಾಗೂ ಫಾಲ್ಗುಣ ಎಂಬ 12 ಮಾಸ (ತಿಂಗಳು) ಗಳು.ಪ್ರತಿ ತಿಂಗಳು ತಲಾ 15 ದಿನಗಳಂತೆ ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ *ಶುಕ್ಲ* ಹಾಗೂ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ *ಕೃಷ್ಣ* ಎಂಬ ಎರಡು ಪಕ್ಷಗಳು.
ಈ ಪಕ್ಷಗಳಲ್ಲಿ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿಯ ನಂತರ ಶುಕ್ಲ ಪಕ್ಷದಲ್ಲಿ 15ನೇ ದಿನ ಹುಣ್ಣಿಮೆ ಮತ್ತು ಕೃಷ್ಣಪಕ್ಷದ 15ನೇ ದಿನ ಅಮಾವಾಸ್ಯೆ ಎಂಬ ತಲಾ 15 ತಿಥಿಗಳಿವೆ. ಇದು ಚಾಂದ್ರಮಾನ ಪದ್ಧತಿ.

ಚಾಂದ್ರಮಾನ ಪದ್ಧತಿಯ ವರ್ಷ (ಸಂವತ್ಸರ)ದ ಮೊದಲ ದಿನ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ. ಹಾಗಾಗಿ ಈ ಪದ್ಧತಿಯನ್ನು ಅನುಸರಿಸುವವರಿಗೆ ಈ ದಿನ *ಯುಗಾದಿ* ಯಾಗಿರುತ್ತದೆ. ಹಾಗಾಗಿ *ಚಾಂದ್ರಮಾನ ಯುಗಾದಿ* ಎಂದು ಕರೆಯಲಾಗುತ್ತದೆ.
ಇದೇ ರೀತಿ ಸೂರ್ಯನ ಗತಿಯನ್ನು ಆಧರಿಸಿ ಸೌರಮಾನ ಪದ್ಧತಿಯನ್ನು ರೂಪಿಸಲಾಗಿದೆ. ಸೂರ್ಯ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಮತ್ತು ಮೀನ ಹೀಗೆ ಹನ್ನೆರಡು ರಾಶಿಗಳಲ್ಲಿ ಒಂದೊಂದು ತಿಂಗಳು ಇರುವುದರಿಂದ ಈ ಪದ್ಧತಿ ಅನುಸರಣೆಯನ್ನು *ಸೌರಮಾನ* ಎನ್ನಲಾಗುತ್ತದೆ.ಹಾಗಾಗಿ ಸೂರ್ಯ ಮೇಷ ರಾಶಿಗೆ ಪ್ರವೇಶಿಸುವ ಸಂಕ್ರಮಣ ದಿನದ ಮರು ದಿನವನ್ನು *ಸೌರಮಾನ ಯುಗಾದಿ* ಎನ್ನಲಾಗುತ್ತದೆ.

ಭಾರತದಲ್ಲಿ ಈ ಎರಡೂ ಪದ್ಧತಿಯನ್ನು ಅನುಸರಿಸಲಾಗುತ್ತದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ *ಸೌರಮಾನ* ಪದ್ಧತಿ ಆಚರಿಸಲಾಗುತ್ತದೆ. ಉಳಿದಂತೆ ರಾಜ್ಯದ ಘಟ್ಟದ ಮೇಲಿನವರು, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ *ಚಾಂದ್ರಮಾನ* ಪದ್ಧತಿ ಆಚರಿಸಲಾಗುತ್ತದೆ.

*13-04-2021ರಂದು ಮಂಗಳವಾರ ನಮಗೆಲ್ಲಾ ಚಾಂದ್ರಮಾನ ಯುಗಾದಿ ಹಾಗೆಯೇ* *14-04-2021 ರಂದು ಸೌರಮಾನ ಯುಗಾದಿ ಆಚರಣೆಯಿದೆ* *ಹಿಂದೆಲ್ಲಾ ಎರಡು ಪದ್ಧತಿಯ ಹಬ್ಬದ ಆಚರಣೆಗೆ 10ರಿಂದ 15 ದಿನ ವ್ಯತ್ಯಾಸವಿರುತ್ತಿತ್ತು. ಶಾರ್ವರಿ ನಾಮ ಸಂವತ್ಸರದಲ್ಲಿ ಅಧಿಕಮಾಸ ಬಂದ ಕಾರಣ ಈಗ ಎರಡೂ ಒಟ್ಟೊಟ್ಟಿಗೆ ಬಂದಿರುವುದು ವಿಶೇಷ.*ಹಬ್ಬದ ದಿನ ಮುಂಜಾನೆ ಎದ್ದು ಹೊಸ ವರ್ಷ ಹರುಷ ತರಲೆಂದು ದೇವರಲ್ಲಿ ಪ್ರಾರ್ಥನೆ ಮಾಡೋಣ. ನಂತರ ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡಿ.*ಹಬ್ಬದ ಅಂಗವಾಗಿ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಿ, ಬಾಗಿಲುಗಳಿಗೆ ಮಾವಿನ ತಳಿರಿನ ತೋರಣ ಕಟ್ಟಿ, ಬೇವಿನ ಸೊಪ್ಪು ಸಿಕ್ಕಿಸಿ. ಶುದ್ಧ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ.*
*ದೇವರಿಗೆ ಯಥಾಶಕ್ತಿ ಭಕ್ತಿಯಿಂದ ಪೂಜೆ ಸಲ್ಲಿಸಿ, ಮನೆ ಮಂದಿಯೊಂದಿಗೆ ದೇವರಿಗೆ ಸಮರ್ಪಿಸಿದ ಬೇವು ಬೆಲ್ಲವನ್ನು ಸ್ವೀಕರಿಸಿ. ಸಂಭ್ರಮದಿಂದ ಭೋಜನ ಮಾಡಿ.*

*ದೇವರು ಬಡತನ ಕೊಡಬಹುದು, ಆದರೆ ಕೊಳೆತನ ಕೊಡುವುದಿಲ್ಲ* ಎಂಬುದು ಮನದಲ್ಲಿರಲಿ. ಅದ್ಧೂರಿ, ಆಡಂಬರ ಇಲ್ಲದಿದ್ದರೂ *ಶುದ್ಧತೆ ಹಾಗೂ ಶುದ್ಧ ಮನಸ್ಸಿನಿಂದ ಹಬ್ಬ ಆಚರಿಸೋಣ*ದಕ್ಷಿಣ ಭಾರತದ ಪ್ರಸಿದ್ಧ ದೊರೆ ಶಾಲಿವಾಹನ ಮಹಾರಾಜ, ಪಟ್ಟಾಭಿಷಿಕ್ತನಾದ ದಿನವಿದು. ಋತುಗಳಲ್ಲಿ ಅತ್ಯಂತ ಶ್ರೇಷ್ಠವಾದ ವಸಂತ ಋತು ಆಗಮನದ ದಿನವಿದು. ಪ್ರಕೃತಿಯಲ್ಲಿ ಮರಗಿಡ ಚಿಗುರಿ ನಳನಳಿಸುವ ಕಾಲವಿದು. ಇಂತಹ ಸಂಭ್ರಮದ ಹಬ್ಬವನ್ನು ಸಡಗರದಿಂದ ಆಚರಿಸೋಣ.

*ಹಬ್ಬದ ದಿನ ಬೇವು ಬೆಲ್ಲ ಮಿಶ್ರಣವನ್ನು ಸೇವಿಸುವಾಗ ಈ ಶ್ಲೋಕವನ್ನು ಹೇಳಿ.*

*ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|*
*ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ||*
ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವಿಸುತ್ತೇನೆ.

*ಬೇವು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ*
*ಶತ್ರುತ್ವ ಬಿಟ್ಟು ಪ್ರೀತಿಯಿಂದ ಸ್ನೇಹವನ್ನೂ ಬೆಳೆಸೋಣ*
*ಮತ್ತೊಮ್ಮೆ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು…*

 

ಬರಹ: ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು

ಅವರಗೊಳ್ಳ, ದಾವಣಗೆರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!