12 K Crores:ಬಿ ಎಸ್ ವೈ ತರಾತುರಿಯಲ್ಲಿ 12 ಸಾವಿರ ಕೋಟಿ ಯೋಜನೆಗೆ ಅನುಮತಿ ಯಾಕೆ.? ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ

ಮಂಡ್ಯ: ಸಿಎಂ ಶೀಘ್ರದಲ್ಲೇ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಓಡಾಡುತ್ತಿದ್ದು, ಇಂತಹ ಹೊತ್ತಲ್ಲಿ ತರಾತುರಿಯಲ್ಲಿ ನಿರಾವರಿ ಇಲಾಖೆಯ 4 ನಿಗಮಗಳಲ್ಲಿ 12ಸಾವಿರ ಕೋಟಿ ಯೋಜನೆಗೆ ಅನುಮತಿ ನೀಡುವ ದರ್ದು ಸಿಎಂಗೆ ಏನಿತ್ತು ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾಜಿ ಸಿಎಂ ಎಚ್ಡಿಕೆ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೆರಡು ದಿನದಲ್ಲಿ ಸಿಎಂ ಬದಲಾಗುವುದಾದರೆ ತರಾತುರಿಯಲ್ಲಿ 12ಸಾವಿರ ಕೋಟಿ ಯೋಜನೆ ಯಾಕೆ.? ಯಾವ ಕಾರಣಕ್ಕಾಗಿ ಈ ತೀರ್ಮಾನ.?ಈಗಲೂ ದುಡ್ಡು ಹೊಡೆಯಲಿಕ್ಕಾ, ರಾಜ್ಯದ ತೆರಿಗೆ ಹಣ ಲೂಟಿ ಮಾಡಲಿಕ್ಕಾ.? ಎಂದು ಖಾರವಾಗಿಯೇ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇವತ್ತಿನ ಸಭೆಯಲ್ಲಿ ಯಡಿಯೂರಪ್ಪ ಅನುಮತಿ ನೀರವಾರಿ ಇಲಾಖೆಯ ನಾಲ್ಕು ನಿಗಮಗಳಿಗೆ ಯೋಜನೆ ರೂಪಿಸಿರುವುದಕ್ಕೆ ಅವರು ಅನುಮತಿ ನೀಡಿದ್ದಾರೆ. 12ಸಾವಿರ ಕೋಟಿ ಯೋಜನೆಯಲ್ಲಿ ಕಾವೇರಿ ನಿಗಮಕ್ಕೆ ಕೇವಲ 1ಸಾವಿರ ಕೋಟಿ ಮಾತ್ರ ನೀಡಿದ್ದು, ಇಲ್ಲಿನ ಜನ ನಿಮಗೇನು ದ್ರೋಹ ಮಾಡಿದ್ದಾರೆ.? ಎಂದು ಗುಡುಗಿದ್ದಾರೆ.
ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹಳೇ ಕರ್ನಾಟಕ ಭಾಗದಿಂದ ಹೋಗುತ್ತಿದೆ. ನನಗೆ ಹಳೇ ಕರ್ನಾಟಕ ಹೊಸ ಕರ್ನಾಟಕದ ಪ್ರಶ್ನೆ ಅಲ್ಲ. ಆ ಭಾಗಕ್ಕೆ ನೀಡುವ ಆದ್ಯತೆಯನ್ನ ಈ ಭಾಗಕ್ಕೂ ನೀಡಬೇಕಿತ್ತು. ಈ ಭಾಗಕ್ಕೆ ಕೇವಲ 1ಸಾವಿರ ಕೋಟಿ ಆ ಭಾಗಕ್ಕೆ 11ಸಾವಿರ ಕೋಟಿ ಯೋಜನೆ ರೂಪಿಸಿರುವುದು ಯಾವ ನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಜವಾಗಲೂ ಆ ಭಾಗದ ಜನರಿಗೆ ನೀರು ಕೊಡಲು ಯೋಜನೆ ರೂಪಿಸಿದ್ದೀರಾ? ಅಥವಾ ನಿಮ್ಮದು ದುಡ್ಡು ಹೊಡೆಯುವ ಯೋಜನೆಯಾ ಎಂದು ಕಿಡಿಕಾರಿದರು.