ಶ್ರೀ ರಾಮುಲು ಗೆ ಮುಂದಿನ ಸಿಎಂ ಮಾಡಿ – ಶ್ರಿರಾಮುಲು ಯುವ ಪಡೆ

IMG-20210722-WA0010

 

ದಾವಣಗೆರೆ: ಮುಖ್ಯಮಂತ್ರಿ ಬದಲಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ಸಿಎಂ ಬದಲಾಯಿಸಲೇಬೇಕು ಎಂದಾದಲ್ಲಿ ಶ್ರೀರಾಮುಲು ಅವರನ್ನು ಸಿಎಂ ಮಾಡುವಂತೆ ಕರ್ನಾಟಕ ರಾಜ್ಯ ಶ್ರೀರಾಮುಲು ಯುವ ಪಡೆ ಹೈಕಮಾಂಡ್ ಗೆ ಒತ್ತಾಯಿಸಿದೆ.

ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ . ಇಲ್ಲವಾದಲ್ಲಿ ಬಿ. ಶ್ರೀರಾಮುಲು ಅವರನ್ನು ಮುಖ್ಯಮಂತ್ರಿ ಘೋಷಿಸಲಿ‌ ಎಂದು ಯುವ ಪಡೆಯ ರಾಜ್ಯಾಧ್ಯಕ್ಷ ಎನ್.ಹೆಚ್. ಹಾಲೇಶ್ ಮತ್ತು ಗೌರವಾಧ್ಯಕ್ಷರಾದ ಎಂ.ನಿಜಲಿಂಗಪ್ಪ ಆಗ್ರಹಿಸಿದ್ದಾರೆ.

ಪ್ರಸ್ತುತ ಕೋವಿಡ್ -19 ಸಂದರ್ಭದಲ್ಲಿ ಯಡಿಯೂರಪ್ಪ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿಯನ್ನು ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾಗಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.ಅವರ ಕಾರ್ಯವೈಖರಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆದ್ದರಿಂದ ಸಿಎಂ ಬಿ.ಎಸ್.ಯಡಿಯೂರಪ್ಪನವರೆ ಮುಂದುವರೆಯುವುದು ಉತ್ತಮ. ಒಂದು ವೇಳೆ ಅವರನ್ನು ಬದಲಾಯಿಸುವುದೇ ಅನಿವಾರ್ಯವಾದಲ್ಲಿ ಬಿ. ಶ್ರೀರಾಮುಲು ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಶ್ರೀರಾಮುಲು ಅವರು ನಾಯಕ ಹಾಗೂ ಶೋಷಣೆಗೊಳಗಾದ ಎಲ್ಲಾ ಜನಾಂಗಗಳ ಪ್ರಭಾವಿ ನಾಯಕರಾಗಿದ್ದು, ರಾಜ್ಯದ ಯಾವುದೇ ಜಿಲ್ಲೆಗೆ ಹೋದರೂ ಜನಬೆಂಬಲ ಯಥೇಚ್ಛವಾಗಿ ಕಂಡು ಬರುತ್ತಿರುವುದನ್ನು ಬಿಜೆಪಿ ವರಿಷ್ಟರು ಗಮನಿಸಿದ್ದಾರೆ. ಅಪಾರ ಜನಮನ್ನಣೆ ಗಳಿಸಿರುವ ಬಿ.ಶ್ರೀರಾಮುಲು ಅವರು ಯಡಿಯೂರಪ್ಪನವರಂತೆಯೇ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗಾಗಿ ಅವರನ್ನೇ ಸಿಎಂ ಮಾಡುವುದು ಉತ್ತಮ ಎಂದು ಅಭಿಪ್ರಾಯಿಸಿದ್ದಾರೆ.

ಬಿಜೆಪಿ ಚುನಾವಣಾ ಪೂರ್ವದಲ್ಲಿ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿತ್ತು. ಹಿಂದುಳಿದವರು, ದಲಿತರು ತಮ್ಮ ನಿಲುವನ್ನು ಚುನಾವಣೆಯಲ್ಲಿ ಭಾಜಪ ಪಕ್ಷದ ಪರ ವಹಿಸಿದ್ದರಿಂದ ಪಕ್ಷವು ಅಧಿಕಾರ ಗದ್ದುಗೆ ಏರಿತು. ಆದರೆ, ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ. ಹೀಗೆ ಎಲ್ಲಾ ಚುನಾವಣೆಗಳಲ್ಲೂ ಶ್ರೀರಾಮುಲು ಅವರನ್ನು ಪ್ರಚಾರಕ್ಕೆ ಬಳಸಿಕೊಂಡು ಕೈ ಬಿಡುವುದು ನಿರಂತರವಾಗಿ ನಡೆಯುತ್ತಾ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ದಲಿತ ನಾಯಕನಾದ ಶ್ರೀರಾಮುಲು ಅವರನ್ನು ಕೇವಲ ದಲಿತಾಸ್ತ್ರವನ್ನಾಗಿ ಪಕ್ಷವು ಬಳಸಿಕೊಳ್ಳುತ್ತಿದೆ‌. ಆದ್ದರಿಂದ ಭಾ.ಜ.ಪ. ಪಕ್ಷದವರಿಗೆ ನಿಜವಾಗಲೂ ದಲಿತಪರ ಒಲವು ಇರುವುದೇ ನಿಜವಾದರೆ ಶ್ರೀರಾಮುಲು ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ನೀಡಿರುವ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವಂತೆ ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!