ರಾಜ್ಯದಲ್ಲಿ ಭಾರಿ ಮಳೆಗೆ ಹಲವು ಜಿಲ್ಲೆಯ ಜನರು ತತ್ತರ: ಕೆಲವೇಡೆ ಪ್ರವಾಹ ಭೀತಿ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಒಳನಾಡಿನಲ್ಲಿ ಕೆಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಕ್ಯಾತನಬೀಡು ಎಂಬಲ್ಲಿ ಬಸವೇಗೌಡ ಎಂಬ 62 ವರ್ಷದ ವೃದ್ಧನ ಮತ್ತು ಹಸುವಿನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಅಂಕೋಲಾ, ಕುಮಟಾ, ಹುಬ್ಬಳ್ಳಿ ಅಲ್ಲಿಯ ನವಲಗುಂದ ತಾಲ್ಲೂಕಿನ ಬೆಣ್ಣಿಹಳ್ಳದಲ್ಲುಂಟಾದ ಪ್ರವಾಹದಲ್ಲಿ ಸಿಲುಕಿದ್ದ ನೂರಾರು ಜನ-ಜಾನುವಾರುಗಳನ್ನು ರಕ್ಷಿಸಲಾಗಿದೆ.
ರಾಜ್ಯದಲ್ಲಿ ಮುಂಗಾರು ಆರಂಭವಾಗಿ ಹಲವು ದಿನಗಳು ಕಳೆದಿದ್ದು, ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ಈಗಾಗಲೇ ಹಲವೆಡೆ ಭೂಕುಸಿತ ಉಂಟಾಗಿದ್ದು , ಪ್ರವಾಹ ಪರಿಸ್ಥಿತಿಗಳು ಎದುರಾಗಿವೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ತಗ್ಗು ಪ್ರದೇಶಗಳಿಗೆ ನದಿ ನೀರು ನುಗ್ಗಿ ಜಲಾವೃತಗೊಂಡಿವೆ. ರಾಜ್ಯದ ಹಾಗೂ ಮಹಾರಾಷ್ಟ್ರದ ಹಲವು ಜಲಾಶಯಗಳು ತುಂಬಿದ್ದು, ನಿರಂತರವಾಗಿ ನದಿಗಳಿಗೆ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳು ಜಲಾವೃತವಾಗುವ ಸಾಧ್ಯತೆಗಳಿದ್ದು, ಈಗಾಗಲೇ, ರಾಜ್ಯ ವಿಪತ್ತು ಸ್ಪಂದನಾ ಪಡೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ.
ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರವಾಹ ಪರಿಸ್ಥಿಯನ್ನು ಎದುರಿಸಲು ನಿಯೋಜಿಸಲಾಗಿದೆ . 24 ಗಂಟೆಗಳ ಕಾರ್ಯ ನಿರ್ವಹಿಸುವ ಪ್ರವಾಹ ನಿಯಂತ್ರಣ ಕೊಠಡಿಯನ್ನು ಬೆಂಗಳೂರಿನ ಕಚೇರಿಯಲ್ಲೂ ಸ್ಥಾಪಿಸಲಾಗಿದೆ.