ಲಿಂಗಾಯತ ಸಮುದಾಯದ ಅವಕೃಪೆಗೆ ಪಾತ್ರರಾದ ಪಕ್ಷಗಳ ಸಾಲಿಗೆ ಬಿಜೆಪಿ ಸೇರ್ಪಡೆಯೇ.!?

ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದ ಲಿಂಗಾಯತ ಸಮುದಾಯದ ನಾಯಕರುಗಳನ್ನು ತುಚ್ಚವಾಗಿ ಕಂಡ ರಾಜಕೀಯ ಪಕ್ಷಗಳು ಅಧಿಕಾರ ಕಳೆದುಕೊಂಡು ಹೀನಾಯ ಸ್ಥಿತಿಗೆ ಹೋದಂತಹ ಉದಾಹರಣೆಗಳು ರಾಜ್ಯದಲ್ಲಿ ಈ ಹಿಂದೆ ಬಹಳ ಇವೆ.
ಮೂರು ರಾಜಕೀಯ ಪಕ್ಷಗಳು ಲಿಂಗಾಯತ ನಾಯಕರುಗಳನ್ನು ಕಡೆಗಣಿಸಿದಾಗ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿ ಹೋಗಿದ್ದು ಇತಿಹಾಸ.
ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಕೋಪಕ್ಕೆ ಕಾಂಗ್ರೆಸ್ ಬಲಿಯಾದರೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಅವರನ್ನು ನಡೆಸಿಕೊಂಡ ರೀತಿಗೆ ಜನತಾದಳ ಹೇಳಹೆಸರಿಲ್ಲದಂತೆ ಆಗಿದ್ದು ಮಾತ್ರ ಸತ್ಯ, ಇನ್ನು ಬಿಜೆಪಿ ಒಮ್ಮೆ ಬಿ.ಎಸ್. ಯಡಿಯೂರಪ್ಪನವರನ್ನು ಕಡೆಗಣಿಸಿ ವಿರೋಧ ಪಕ್ಷದ ಸ್ಥಾನ ಗಳಿಸಲು ಸಾಧ್ಯವಾಗದಂಥ ಸ್ಥಿತಿಗೆ ಬಂದಿದ್ದು ಮಾತ್ರ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದಿದೆ.
ಲಿಂಗಾಯತ ಸಮುದಾಯ ಯಡಿಯೂರಪ್ಪನವರ ನಾಯಕತ್ವದಲ್ಲಿನ ಅಭಿಮಾನದಿಂದ ರಾಜ್ಯದಲ್ಲಿ ಬಿಜೆಪಿಯ ಜೊತೆ ನಿಂತು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಮೊದಲಿನಿಂದಲೂ ಬಿಜೆಪಿಯ ಕೇಂದ್ರ ತಂಡ ಲಿಂಗಾಯತ ಸಮುದಾಯವನ್ನು ತುಚ್ಯವಾಗಿಯೇ ಕಾಣುತ್ತ ಬಂದಿದೆ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಚುನಾವಣೆಯಲ್ಲಿ ಸೋತಿದ್ದು, ಸೋತ ನಂತರ ಲಿಂಗಾಯತ ಮತ್ತು ಯಡಿಯೂರಪ್ಪನವರ ಶಕ್ತಿ ಅರಿತು ಮತ್ತೆ ಯಡಿಯೂರಪ್ಪನವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೂ ಸಹ, ಅವರಿಗೆ ಅಧಿಕಾರ ನೀಡುವಾಗ ನೀಡಿದ ಹಿಂಸೆ ಮಾತ್ರ ಅಷ್ಟಿಷ್ಟಲ್ಲ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ಸಹ ಸಂಪುಟ ವಿಸ್ತರಣೆ ಮಾಡಲು ಅವಕಾಶ ನೀಡಲಿಲ್ಲ.
ತೆರಿಗೆ ಕಟ್ಟುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ 3ನೇ ಸ್ಥಾನದಲ್ಲಿ ಇದ್ದರೂ ಸಹ ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುವ ಮೂಲಕ ಲಿಂಗಾಯತ ಮುಖ್ಯಮಂತ್ರಿಯ ಬಗ್ಗೆ ರಾಜ್ಯದಲ್ಲಿ ಆಸಮಾಧಾನವಾಗುವ ರೀತಿ ನಡೆದುಕೊಂಡಿದ್ದು ಮಾತ್ರ ಸತ್ಯ, ಇದು ಮುಂದುವರಿದು ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದಾಗಲೂ ಸಹ ಕೇಂದ್ರ ಸರ್ಕಾರ ಸಹಾಯ ಹಸ್ತ ಚಾಚುವಲ್ಲಿ ಮಲತಾಯಿ ಧೋರಣೆ ತೋರಿತ್ತು, ಎಷ್ಟು ಸಾಧ್ಯವೋ ಅಷ್ಟು ರಾಜ್ಯದ ಮುಖ್ಯಮಂತ್ರಿಯನ್ನು, ಸಮುದಾಯವನ್ನು ಅವಮಾನಿಸಿದ ಕೀರ್ತಿ ಈ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ.
ಲೋಕಸಭೆಯಲ್ಲಿನ ಬಿಜೆಪಿಯ 303 ಸದಸ್ಯರಲ್ಲಿ, ಲಿಂಗಾಯತ ಸಂಸದರ ಸಂಖ್ಯೆ 10 (ಕರ್ನಾಟಕದಿಂದ 9 ಮಹಾರಾಷ್ಟ್ರದಿಂದ 1) ಅಂದರೆ ಶೇಕಡ 3.3 ರಷ್ಟು ಲಿಂಗಾಯತ ಸಂಸದರು ಇದ್ದಾರೆ, ಇದರ ಪ್ರಕಾರ 80 ಸಂಪುಟ ಸದಸ್ಯರ ಪೈಕಿ 3 ಸಚಿವರನ್ನಾದರೂ ನೀಡಬೇಕಿತ್ತು, ಆದರೆ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ನೀಡಿದ ಪ್ರತಿನಿತ್ಯ ಮಾತ್ರ 1 ರಾಜ್ಯ ಖಾತೆ, ಇಡೀ ಸಮುದಾಯ ರಾಜ್ಯದಲ್ಲಿ ಒಟ್ಟಾಗಿ ಬಿಜೆಪಿ ಬೆಂಬಲಿಸಿದರೂ ಸಹ ರಾಜ್ಯಪಾಲರೂಗಳನ್ನು ನೇಮಕ ಮಾಡುವಾಗ ಸಮುದಾಯದ ಒಬ್ಬರನ್ನು ಕೂಡ ಪರಿಗಣಿಸದೆ ಅವರಿಗೆ ಅವಮಾನ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಲಿಂಗಾಯತ ಸಮುದಾಯ ಬೇರೆ ಪಕ್ಷಗಳ ಕಡೆ ಮುಖಮಾಡುವ ಮನಸ್ಸು ಮಾಡಿದರೆ, ಅವರ ಆಯ್ಕೆ ಕಾಂಗ್ರೆಸ್ ಪಕ್ಷ ಆದರೂ ಆಶ್ಚರ್ಯವಿಲ್ಲ, ಉತ್ತರ ಕರ್ನಾಟಕ ಭಾಗದ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಮಧ್ಯ ಕರ್ನಾಟಕದ ಎಸ್.ಎಸ್. ಮಲ್ಲಿಕಾರ್ಜುನ್, ಗಡಿಭಾಗದ ಈಶ್ವರ್ ಖಂಡ್ರೆ ಇವರುಗಳಲ್ಲಿ ಯಾರಾದರೊಬ್ಬರು ಭವಿಷ್ಯದ ಲಿಂಗಾಯತ ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ಅಲ್ಲಗೆಳೆಯುವಂತಿಲ್ಲ.