ಭವಾನಿ ರೇವಣ್ಣರ 1.5 ಕೋಟಿಯ ಕಾರು ಯಾವುದು? ಅದರ ವಿಶೇಷತೆಯೇನು?

hich-car-is-bhavani-revannas-worth-rs-1-5-crore-what-is-so-special-about-it

ಹಾಸನ: ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರ ಸೊಸೆ, ಮಾಜಿ ಸಚಿವ ರೇವಣ್ಣ ಅವರ ಪತ್ನಿ, ಸಂಸದ ಪ್ರಜ್ವಲ್ ತಾಯಿ ಭವಾನಿ ರೇವಣ್ಣ (Bhavani Revanna) ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಕಾರಿಗೆ ಗುದ್ದಿದ ಬೈಕ್​ ಸವಾರನೊಬ್ಬನಿಗೆ ಅವಾಚ್ಯ ಪದಗಳಿಂದ ಬೈಯುವ ಮೂಲಕ ಅವರು ಜನಸಾಮಾನ್ಯರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಕರಣವನ್ನು ಸುಖಾಂತ್ಯ ಮಾಡಲು ದೊಡ್ಡಗೌಡರ ಫ್ಯಾಮಿಲಿ ಶ್ರಮ ವಹಿಸುತ್ತಿದೆ. ಏತನ್ಮಧ್ಯೆ, ಭವಾನಿ ರೇವಣ್ಣ ಅವರು ಬೈಗುಳದ ನಡುವೆ ನನ್ನ 1.5 ಕೋಟಿ ರೂಪಾಯಿಯ ಕಾರಿಗೆ ಡ್ಯಾಮೇಜ್​ ಆಗಿದೆ. ನ್ಯಾಯ ಮಾತನಾಡೋರು ರಿಪೇರಿ ಮಾಡೋದಕ್ಕೆ 50 ಲಕ್ಷ ರೂಪಾಯಿ ಕೊಡಿ ಎಂದು ಹೇಳಿದ್ದರು. ಹೀಗಾಗಿ ಇದ್ಯಾವ ಕಾರು ಎಂಬ ಕುತೂಹಲ ಮೂಡಿದೆ. ಹೀಗಾಗಿ ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರು ಯಾವುದು ಮತ್ತು ಅದರ ವಿಶೇಷತೆ ಏನು ಎಂಬುದನ್ನು ನೋಡೋಣ.

ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಬ್ರಾಂಡ್ ನೇಮ್​ ಟೊಯೋಟಾ ವೆಲ್​ಫೈರ್ (Toyoto Vellfire)​​. ಇದು ಜಪಾನ್ ಮೂಲಕ ಟೋಯೋಟಾ ಕಂಪನಿಯು ನಿರ್ಮಿಸುವ ಕಾರು. ಜಪಾನ್​ ತಾಂತ್ರಿಕತೆಯೊಂದಿಗೆ ಟೋಯೋಟಾ ಕಂಪನಿಯು ಭಾರತದಲ್ಲಿ ಮಾರುತ್ತಿರುವ ಅತ್ಯಂತ ದುಬಾರಿ ಬೆಲೆಯ ಕಾರು. ಅಂದ ಹಾಗೆ ಬೆಂಗಳೂರಿನ ಬಿಡದಿಯಲ್ಲಿರುವ ಟೊಯೋಟಾ ಕಂಪನಿಯ ನಿರ್ಮಾಣ ಘಟಕದಲ್ಲಿಯೇ ಈ ಕಾರನ್ನು ಉತ್ಪಾದಿಸಲಾಗುತ್ತದೆ. ಫೆಬ್ರವರಿ 26, 2020 ರಂದು ಸುಮಾರು 80 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯೊಂದಿಗೆ ಮೊಟ್ಟ ಮೊದಲ ಕಾರು ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಸುಧಾರಿತ ಆವೃತ್ತಿ (ಫೇಸ್​ಲಿಫ್ಟ್​) ಸೆಪ್ಟೆಂಬರ್ 2023ರಲ್ಲಿ ಬಿಡುಗಡೆ ಮಾಡಲಾಗಿದೆ.

ಇದು ಎಂಪಿವಿ (ಮಲ್ಟಿ ಪರ್ಪಸ್​ ವೆಹಿಕಲ್​) ಮಾಡೆಲ್​ನ ಕಾರು. ಟೊಯೊಟಾದ ಇನ್ನೋವಾ ಕೂಡ ಎಂಪಿವಿ ವರ್ಗಕ್ಕೆ ಸೇರಿದ ಕಾರು. ಆದರೆ, ಐಷಾರಾಮಿ ಫೀಚರ್​ಗಳು ಹಾಗೂ ವಿಶಾಲವಾದ ಜಾಗ ಹಾಗೂ ಸುಖಮಯ ಪ್ರಯಾಣದ ಕಾರಣಕ್ಕೆ ವೆಲ್​ಫೈರ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಜತೆಗೆ ಬೆಲೆಯೂ ಹೆಚ್ಚು. ಹೀಗಾಗಿ ಇದನ್ನು ಹೆಚ್ಚಾಗಿ ಸೆಲೆಬ್ರಿಟಿಗಳೇ ಖರೀದಿ ಮಾಡುತ್ತಿದ್ದಾರೆ. ಬಾಲಿವುಡ್​ ತಾರೆಯರು ಸೇರಿದಂತೆ ಭಾರತದ ಶ್ರೀಮಂತರು ಈ ಕಾರಿನ ಟಾರ್ಗೆಟ್ ಕಸ್ಟಮರ್ಸ್​​. ರಾಜಕಾರಣಿಗಳ ಕುಟುಂಬದ ಸೊಸೆಯಾಗಿರುವ ಭವಾನಿ ಅವರು ಅರ್ಹವಾಗಿ ಇದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

ಹೊಸ ಟೊಯೊಟಾ ವೆಲ್ಫೈರ್ ವಿನ್ಯಾಸ

ಇತ್ತೀಚೆಗೆ ಬಿಡುಗಡೆಯಾದ ವೆಲ್ ಫೈರ್ ಬಹುತೇಕ ಹಳೆಯ ನೋಟವನ್ನೇ ಉಳಿಸಿಕೊಂಡಿದೆ ಅಂದರೇ ಒಂದು ರೀತಿ ಸಣ್ಣ ವ್ಯಾನ್ ಮಾದರಿಯ ಐಷಾರಾಮಿ ನೋಟ. ಟೊಯೊಟಾ ಮುಂಭಾಗದಲ್ಲಿ ಆರು-ಸ್ಲಾಟ್ ಗ್ರಿಲ್ ಗಳಿದ್ದು. ಮಧ್ಯದಲ್ಲಿ ಟೊಯೋಟಾ ಲೋಗೋವನ್ನು ಅಳವಡಿಸಲಾಗಿದೆ. ಇದು ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳಿಂದ ಹೊಂದಿದೆ. ಹೆಡ್ ಲ್ಯಾಂಪ್ ಗಳ ಕೆಳಭಾಗದಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳಿವೆ. ಯು-ಆಕಾರದ ಕ್ರೋಮ್ ಸ್ಟ್ರಿಪ್ ಎರಡು ಹೆಡ್ ಲ್ಯಾಂಪ್ ಗಳನ್ನು ಸಂಪರ್ಕಿಸುವ ಬಂಪರ್ ನಡುವೆ ಸಾಗಿದೆ.

ವೆಲ್​ಫೈರ್​​ನ ಗ್ಲಾಸ್ ಹೌಸ್ ಕ್ರೋಮ್ ಔಟ್ ಲೈನ್ ಹೊಂದಿದೆ. ಹಿಂಭಾಗದಲ್ಲಿ ವಿ-ಆಕಾರದ ಟೈಲ್ ಲ್ಯಾಂಪ್ ಆವರಣವನ್ನು ಹೊಂದಿದ್ದು, ವಿಸ್ತ್ರತ ಕ್ರೋಮ್ ಟ್ರಿಮ್ ಇದೆ. ವೆಲ್ಫೈರ್ ಬ್ಯಾಡ್ಜಿಂಗ್ ಮತ್ತು ಮಧ್ಯದಲ್ಲಿ ದೊಡ್ಡ ಟೊಯೊಟಾ ಲೋಗೊವನ್ನು ಹೊಂದಿದೆ.

ಇಂಟೀರಿಯರ್ ವಿಶೇಷತೆ

ಹೊಸ ವೆಲ್ ಫೈರ್​ನಲ್ಲಿ ಕಡಿಮೆ ಬಟನ್ ಇರುವ ಮತ್ತು ಅತ್ಯಂತ ಸರಳವಾಗಿ ಕಾಣುವ ಡ್ಯಾಶ್ ಬೋರ್ಡ್ ನೀಡಲಾಗಿದೆ. ಬಹುತೇಕ ಕೆಲಸವನ್ನು ದೊಡ್ಡ, 14-ಇಂಚಿನ ಟಚ್ ಸ್ಕ್ರೀನ್ ನಲ್ಲಿ ಅಳವಡಿಸಲಾಗಿದೆ. ಹೆಚ್ಚು ಆರಾಮದಾಯಕ ಸೀಟ್ ವಿನ್ಯಾಸವನ್ನು ಇದು ಹೊಂದಿದೆ. ದೊಡ್ಡ ಓವರ್ ಹೆಡ್ ಕನ್ಸೋಲ್, ಹಲವು ಎಸಿ ವೆಂಟ್ ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಪುಲ್-ಡೌನ್ ಸನ್ ಶೇಡ್​ ಈ ಕಾರಿನಲ್ಲಿದೆ.

ಟಾಪ್ ಎಂಡ್​ ವೆಲ್​ಫೈರ್​ ವಿಐಪಿ ಟ್ರಿಮ್​ನಲ್ಲಿ ಎಕ್ಸಿಕ್ಯೂಟಿವ್ ಲಾಂಜ್ ಪ್ಯಾಕೇಜ್​ ಜತೆ ನೀಡಲಾಗುತ್ತದೆ. ಈ ಕಾರಿನ ಎರಡನೇ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟ್​ಗಳು ಮಾತ್ರ ಇರುತ್ತವೆ. ಪ್ರತ್ಯೇಕ ಕಂಟ್ರೋಲ್​ ಯೂನಿಟ್​ ಕೂಡ ಇದೆ. ಇದು ಹಿಂಬದಿ ಪ್ರಯಾಣಿಕರಿಗೆ ಮೀಡಿಯಾ ಮತ್ತು ಕ್ಲೈಮೇಟ್​ ಕಂಟ್ರೋಲ್​ ಸೆಟ್ಟಿಂಗ್​​ಗಳನ್ನು ಮತ್ತು ಸನ್​​ಶೇಡ್​ಗಳನ್ನು ನೀಡುತ್ತದೆ.

ಹೆಡ್ಸ್-ಅಪ್ ಡಿಸ್​ಪ್ಲೇ ವೈರ್​ಲೆಸ್​ ಚಾರ್ಜರ್, ಎರಡನೇ ಸಾಲಿನ ಸೀಟುಗಳಿಗೆ ಒಟ್ಟೋಮನ್ (ಹೈ ಟ್ರಿಮ್) ಮತ್ತು ಎಂಟು ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತಿತರ ವೈಶಿಷ್ಟ್ಯಗಳನ್ನು ನೀಡಲಾಗಿದೆ.. ಟೊಯೊಟಾ 60 ಕ್ಕೂ ಹೆಚ್ಚು ಕನೆಕ್ಟೆಡ್​ ವಿಶೇಷತೆಗಳನ್ನು ಹೊಂದಿದೆ.

ಸಿಕ್ಕಾಪಟ್ಟೆ ಸೇಫ್​ ಕಾರು

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ವೆಲ್​ಫೈರ್​ ಎಂಪಿವಿ ಟೊಯೊಟಾ ಸೇಫ್ಟಿ ಸೆನ್ಸ್ ಅಡಾಸ್​​ ಸಿಸ್ಟಮ್ ಅನ್ನು ಹೊಂದಿದೆ. ಇದು ಅಪಘಾತದ ಮೊದಲಿನ ಸುರಕ್ಷತಾ ವ್ಯವಸ್ಥೆ, ಲೇನ್ ಟ್ರೇಸ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್​ನೊಂದಿಗೆ ಬರುತ್ತದೆ. ಇದಲ್ಲದೆ, ಇದು ಆರು ಏರ್ ಬ್ಯಾಗ್​​ಗಳು, ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಕೂಡ ಪಡೆಯುತ್ತದೆ.

ಎಂಜಿನ್ ಪವರ್​ ಏನಿದೆ?

ವೆಲ್ ಫೈರ್ ಟೊಯೊಟಾದ ಮಾಡ್ಯುಲರ್ ಟಿಎನ್​​ಜಿಎ-ಕೆ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿದೆ. ಇದು 4,995 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,950 ಎಂಎಂ ಎತ್ತರ ಮತ್ತು 3,000 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ವೆಲ್ ಫೈರ್ 193 ಬಿಹೆಚ್​​ಪಿ, 240 ಎನ್ಎಂ ಪವರ್​ ಸೃಷ್ಟಿಸುವ 2.5-ಲೀಟರ್​ನ ನಾಲ್ಕು ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಹೊಂದಿದೆ. ಇದರಲ್ಲಿ ಇ ಸಿವಿಟಿ ಗೇರ್​ಬಾಕ್ಸ್​ ಇದೆ. ವೆಲ್​ಫೈರ್​ ಪ್ರತಿ ಲೀಟರ್​ ಪೆಟ್ರೋಲ್​ಗೆ 19.28 ಕಿ.ಮೀ ಮೈಲೇಜ್ ನೀಡುತ್ತದೆ.

ಒಂದೂವರೆ ಕೋಟಿ ಬೆಲೆ ಇರೋದು ಹೌದಾ?

ಖಂಡಿತಾ. ಭವಾನಿ ರೇವಣ್ಣ ಅವರು ಕೋಪದ ಭರದಲ್ಲಿ ಕೆಟ್ಟದಾಗಿ ಬೈದಿರಬಹುದು. ಆದರೆ, ರೇಟ್​ ಬಗ್ಗೆ ಸುಳ್ಳು ಹೇಳಿಲ್ಲ. ಈ ಕಾರಿನ ಬೆಲೆ 1. 5 ಕೋಟಿ ರೂಪಾಯಿಗಿಂತಲೂ ಹೆಚ್ಚಿದೆ. ಕಾರು ಕೇವಲ 2 ವೇರಿಯೆಂಟ್​ಗಳಲ್ಲಿ ಮಾತ್ರ ಲಭ್ಯವಿದೆ. ಬೇಸ್​ ಮಾಡೆಲ್​ ಹೈ (hi) ಎಂಬ ಹೆಸರಿನೊಂದಿಗೆ ಲಭ್ಯವಿದ್ದರೆ, ಇನ್ನೊಂದು ಮಾಡೆಲ್​ ವಿಐಪಿ ಎಕ್ಸೆಕ್ಯುಟಿವ್​ ಲಾಂಜ್​  ರೂಪದಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಬೇಸ್​ ಮಾಡೆಲ್​ ಕಾರಿನ ಆನ್​ ರೋಡ್ ಬೆಲೆ 1,48,58,511 ರೂಪಾಯಿ (1.48 ಕೋಟಿ). ಇನ್ನೊಂದು ವೇರಿಯೆಂಟ್​ಗೆ 1,60,94,733 ಕೋಟಿ ರೂಪಾಯಿ. ಅಂದರೆ ಭವಾನಿ ರೇವಣ್ಣ ಅವರು ಹೇಳಿದ್ದಕ್ಕಿಂತ ಇನ್ನೂ 10 ಲಕ್ಷ ರೂಪಾಯಿ ಅಧಿಕ. ಇಲ್ಲಿಗೆ ಮುಗಿದಿಲ್ಲ. 1.5 ಕೋಟಿ ಇದ್ದ ತಕ್ಷಣವೇ ಈ ಕಾರು ತಗೊಂಡು ಬರೋದಿಕ್ಕೆ ಆಗುವುದಿಲ್ಲ. ಇತ್ತೀಚಿನ ಮಾಹಿತಿ ಪ್ರಕಾರ ಈ ಕಾರಿನ ವೇಟಿಂಗ್ ಪಿರಿಯೆಡ್​ (ಕಾಯುವಿಕೆಯ ಅವಧಿ) 14 ತಿಂಗಳು. ಅಂದರೆ, ಕಾರು ಬುಕ್ ಮಾಡಿ 1 ವರ್ಷಕ್ಕೂ ಅಧಿಕ ದಿನಗಳು ಕಾಯಬೇಕು.

Leave a Reply

Your email address will not be published. Required fields are marked *

error: Content is protected !!