ರಾಮನ ವಿಗ್ರಹ ಪ್ರತಿಷ್ಠಾಪನೆ: ಸಚಿನ್, ಕೊಹ್ಲಿ ಸೇರಿದಂತೆ 7ಸಾವಿರ ಗಣ್ಯರಿಗೆ ಆಹ್ವಾನ…!!
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಅದೆಷ್ಟೋ ರಾಮಭಕ್ತರ ಕನಸು ನನಸಾಗುವ ಪರ್ವ ಕಾಲ ಕೂಡಿಬಂದಿದೆ. ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ಅನೇಕ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಇದೀಗ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗುತ್ತಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಹೊಸ ವರ್ಷದಲ್ಲಿ ಅಂದರೆ ಜನವರಿ 22ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್, ಕ್ರಿಕೆಟ್ ದಿಗ್ಗಜರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಯಾರೆಲ್ಲಾ ವಿಶೇಷ ಆಹ್ವಾನಿತರು ಗೊತ್ತಾ…?
ಉದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ ಸೇರಿದಂತೆ 7000ಗಣ್ಯರನ್ನು ದೇಗುಲದ ಟ್ರಸ್ಟ್ ಆಹ್ವಾನಿಸಿದೆ. ಅಷ್ಟು ಮಾತ್ರವಲ್ಲದೆ ಪ್ರಸಿದ್ಧ ಟಿವಿ ಧಾರವಾಹಿ ರಾಮಾಯಣದಲ್ಲಿ ರಾಮನ ಪಾತ್ರಧಾರಿ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರಧಾರಿ ದೀಪಿಕಾ ಚಿಖ್ಲಿಯಾ ಅವರನ್ನೂ ಆಮಂತ್ರಿಸಲಾಗಿದೆ. 3000ವಿಐಪಿಗಳು ಸೇರಿದಂತೆ 7000 ಮಂದಿಗೆ ಈಗಾಗಲೇ ಆಹ್ವಾನ ಪತ್ರಿಕೆ ನೀಡಿದೆ. ಅಯೋಧ್ಯೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ 50ಕರ ಸೇವಕರ ಕುಟುಂಬಗಳಿಗೂ ಆಮಂತ್ರಣ ನೀಡಲಾಗಿದೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ, ಯೋಗಗುರು ರಾಮ್ ದೇವ್ ಆಹ್ವಾನ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ.
4000 ಸಂತರಿಗೂ ಆಹ್ವಾನ..!
ನ್ಯಾಯಾಧೀಶರು, ವಿಜ್ಞಾನಿಗಳು, ಬರಹಗಾರರು, ಕವಿಗಳು, ಪುರೋಹಿತರು, ಪೌರ ಕಾರ್ಮಿಕರು, ನಿವೃತ್ತ ಸೇನಾ ಅಧಿಕಾರಿಗಳು, ವಕೀಲರು, ಪದ್ಮಶ್ರೀ ಪುರಸ್ಕೃತರನ್ನು ಒಳಗೊಂಡಂತೆ ಈ ಬಾರಿ ಅಯೋಧ್ಯೆಗೆ ಒಟ್ಟು 4 ಸಾವಿರ ಸಂತರನ್ನೂ ಕೂಡಾ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.
ರಾಮಮಂದಿರ ಹೋರಾಟ ಬೆಂಬಲಿಸಿದ ಪತ್ರಕರ್ತರಿಗೂ ವಿಶೇಷ ಆಮಂತ್ರಣ…!
ರಾಮಮಂದಿರ ಹೋರಾಟಕ್ಕೆ ನಿರಂತರವಾಗಿ ಬೆಂಬಲ ನೀಡಿದ ಪತ್ರಕರ್ತರನ್ನೂ ಆಹ್ವಾನಿಸಲಾಗಿದೆ. ಬಹುಶಃ ಅವರಿಲ್ಲದಿದ್ದರೆ ಹೋರಾಟ ಸಂಪೂರ್ಣವಾಗಿರುತ್ತಿರಲಿಲ್ಲ ಎಂದು ಬಿಜೆಪಿ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ. ಇನ್ನು 50ರಾಷ್ಟ್ರಗಳ ತಲಾ ಒಬ್ಬರು ಪ್ರತಿನಿಧಿಯನ್ನು ಆಹ್ವಾನಿಸಲು ಪ್ರಯತ್ನ ನಡೆಯುತ್ತಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಆಹ್ವಾನಿತರು ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ..?
ಆಹ್ವಾನಿತರು ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಬಾರ್ ಕೋಡ್ ಸೃಷ್ಟಿಸಿ ಎಂಟ್ರಿ ಪಾಸ್ ನೀಡಲಾಗುತ್ತದೆ. 7000 ಅಭ್ಯಾಗತರಲ್ಲಿ ಒಟ್ಟು 4000 ಧಾರ್ಮಿಕ ಮುಖಂಡರು, 3000 ವಿಐಪಿಗಳು ಆಗಮಿಸಲಿದ್ದಾರೆ ಎಂದು ಶರದ್ ಶರ್ಮಾ ತಿಳಿಸಿದ್ದಾರೆ.