ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ; ಇವರಲ್ಲಿ ಯಾರಾಗ್ತಾರೆ ಅಧ್ಯಕ್ಷ?
ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಯ್ಕೆಯಾದ ಬೆನ್ನೇಲೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಅದಕ್ಕಾಗಿ ಸ್ಥಳೀಯ ನಾಯಕರಾದ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ ಬೆಂಬಲಿಗರು ನಾಯಕರ ಸಂಪರ್ಕದಲ್ಲಿದ್ದಾರೆ.
ಈಗಾಗಲೇ ಹಾಲಿ ಇರುವ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಅಧಿಕಾರ ಅವಧಿ ಮುಗಿದು, ಒಂದು ವರ್ಷ ಕಳೆದಿದೆ. ಈಗ ಹೊಸ ಜಿಲ್ಲಾಧ್ಯಕ್ಷ ಆಯ್ಕೆ ಅನಿವಾರ್ಯವಾಗಿದ್ದು, ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆದಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್ ಅಧಿಕಾರವಾದಿ ಮುಗಿದಿದ್ದರೂ, ಹೊಸಬರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರಲಿಲ್ಲ. ಅದೇ ರೀತಿ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿಯೂ ಸಹ ಜಿಲ್ಲಾಧ್ಯಕ್ಷರ ಅಧಿಕಾರವಧಿ ಮುಗಿದರೂ ಹೊಸ ಆಯ್ಕೆ ಆಗಿರಲಿಲ್ಲ.
ಯಾರೆಲ್ಲಾ ಪೈಪೋಟಿಯಲ್ಲಿದ್ದಾರೆ?
ಸದ್ಯ ಬಿಜೆಪಿ ನಾಯಕತ್ವ ಪಟ್ಟಕ್ಕಾಗಿ ಬಿಜೆಪಿ ನಾಯಕರಾದ ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ, ಕೆ.ಎಂ.ಸುರೇಶ್, ರಾಜನಹಳ್ಳಿ ಶಿವಕುಮಾರ್ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಸದ್ಯ ಜಗದೀಶ್ ದಾವಣಗೆರೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶ್ರೀನಿವಾಸ ದಾಸ ಕರಿಯಪ್ಪ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ, ಕೆಎಂ ಸುರೇಶ್ ಹಾಗೂ ರಾಜನಹಳ್ಳಿ ಶಿವಕುಮಾರ್ ದೂಡಾ ಮಾಜಿ ಅಧ್ಯಕ್ಷರಾಗಿದ್ದವರು. ಅವರಲ್ಲಿ ಕೆಎಂ ಸುರೇಶ್ ಗೆ ಮಾಜಿ ಶಾಸಕ ರವೀಂದ್ರನಾಥ್ ಆರ್ಶೀವಾದವಿದೆ. ಉಳಿದ ಮೂವರಿಗೆ ಸಂಸದ. ಜಿ.ಎಂ.ಸಿದ್ದೇಶ್ವರ ಕೃಪಾಕಟಕ್ಷವಿದೆ. ಈ ಇಬ್ಬರು ನಾಯಕರು ಜಿಲ್ಲಾಧ್ಷಕ್ಷ ಯಾರು ಆಗಬೇಕೆಂದು ಅಪೇಕ್ಷೆ ಮಾಡುತ್ತಾರೆಯೋ ಅವರು ದಾವಣಗೆರೆ ಬಿಜೆಪಿ ಸಾರಥಿಯಾಗುತ್ತಾರೆ.
ಚುನಾವಣೆ ಇಲ್ಲ; ಅವಿರೋಧ ಆಯ್ಕೆ ಮಾತ್ರ
ಸದ್ಯ ಬಿಜೆಪಿ ಪಕ್ಷದ ನಿಯಮಾನುಸಾರ ಚುನಾವಣೆ ಮೂಲಕ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಚುನಾವಣೆ ನಡೆಯಬೇಕು. ಬಿಜೆಪಿ ಸದಸ್ಯರು ಮತದಾನ ಮಾಡುವ ಹಕ್ಕನ್ನು ಪಡೆದಿರುತ್ತಾರೆ. ಆದರೆ ಈ ನಿಯಮ ಈ ಹಿಂದೆಯೂ ನಡೆದಿಲ್ಲ, ಮುಂದೆಯೂ ನಡೆಯೋದಿಲ್ಲ. ಬದಲಾಗಿ ಅವಿರೋಧವಾಗಿ ನಾಯಕನನ್ನು ಆಯ್ಕೆ ಮಾಡುತ್ತಾರೆ. ಅಂತೆಯೇ ದಾವಣಗೆರೆಯಲ್ಲಿಯೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಒಂದು ವೇಳೆ ಒಮ್ಮತದ ಅಭಿಪ್ರಾಯ ಬಾರದೇ ಹೋದರೆ ರಾಜ್ಯ ನಾಯಕರು ಮಧ್ಯ ಪ್ರವೇಶಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಏನು ಮಾನದಂಡ?
ಪ್ರಮುಖ ಹುದ್ದೆಗಳಲ್ಲಿರುವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗುವುದು. ಆದರೆ ಅಧಿಕಾರವಾವಧಿ ಮೂರು ವರ್ಷ ಮಾತ್ರ. ಒಂದು ಬಾರಿ ಮಾತ್ರ ಅವಕಾಶ ಸ್ಥಳೀಯ ಕಾರ್ಯಕರ್ತರಿಗೆ ಆದ್ಯತೆ, ವರ್ಚಸ್ಸು, ವಿರೋಧ ಪಕ್ಷಕ್ಕೆ ಟಾಂಗ್ ಕೊಡುವ ಮಾತಿನ ದಾಟಿ ಸೇರಿದಂತೆ ಇನ್ನಿತರ ಗುಣಗಳನ್ನು ನೀಡಿ ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಗುತ್ತದೆ.
ಲೋಕಸಭೆ ಚುನಾವಣೆ ಟಾರ್ಗೇಟ್
ಲೋಕಸಭೆ ಚುನಾವಣೆ, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿರುವ ಹಿನ್ನೆಲೆ ಸಮರ್ಥ ನಾಯಕನನ್ನು ಹುಡುಕಲು ಬಿಜೆಪಿ ಹೊರಟಿದೆ. ಇನ್ನು ನಾಲ್ಕು ಬಾರಿ ಲೋಕಸಭೆ ಗೆದ್ದಿರುವ ಬಿಜೆಪಿ ಈ ಬಾರಿಯೂ ಗೆಲುವಿನ ನಾಗಲೋಟ ಮುಂದುವರೆಸಲು ಉತ್ತಮ ಆಯ್ಕೆ ನಡೆದಿದೆ. ಇನ್ನು ಹಿಂದಿನ ಬಿಜೆಪಿ ಜಿಲ್ಲಾಧ್ಯಕ್ಷರ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದ್ದು, ಈ ಬಾರಿ ಆಯ್ಕೆಯಾಗುವ ಜಿಲ್ಲಾಧ್ಯಕ್ಷರು ಹೇಗೆ ಪಕ್ಷವನ್ನು ಬಲಪಡಿಸಲಿದ್ದಾರೆ ಕಾದು ನೋಡಬೇಕು.