ಕೋತಿಗಳ ಮಾರಣಹೋಮ ಕೇಸ್: ಸ್ವಯಂ ದೂರು ದಾಖಲಿಸಿಕೊಂಡ ಹೈ ಕೋರ್ಟ್
ಹಾಸನ: ಹಾಸನದ ಬೇಲೂರು ತಾಲ್ಲೂಕಿನಲ್ಲಿ ನಡೆದಿರುವ ಕೋತಿಗಳ ಮಾರಣಹೋಮ ನಿಜಕ್ಕೂ ಅಮಾನವೀಯ ಘಟನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅಡಿ ದೂರು ದಾಖಲಿಸಿಕೊಂಡಿದೆ.
ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಗ್ರಾಮದಲ್ಲಿ ಕೋತಿಗಳನ್ನು ಅಮಾನವೀಯವಾಗಿ ವಿಷಹಾಕಿ ಹತ್ಯೆ ಮಾಡಲಾಗಿರುವುದು ಖಂಡನೀಯವಾಗಿದ್ದು, ‘ಪ್ರತಿಯೊಂದು ಜೀವಿಗೂ ಬದುಕುವ ಮತ್ತು ಸುರಕ್ಷಿತವಾಗಿರುವ ಹಕ್ಕಿದೆ’. ಆದರೆ, ಮಾಧ್ಯಮಗಳ ವರದಿ ಅನ್ವಯ ಸತ್ತಿರುವ ಮಂಗಗಳ ಜತೆಗೆ 15 ಜೀವಂತ ಕೋತಿಗಳನ್ನು ಹಾಕಿ ತುಂಬಿ ಅಮಾನವೀಯತೆ ಮೆರೆಯಲಾಗಿದೆ ಎಂದು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದ ನ್ಯಾಯಾಧೀಶರು ಆಕ್ಷೇಪಿಸಿದ್ದಾರೆ.
ಕೋತಿಗಳ ಹಾವಳಿ ಹೆಚ್ಚಾಗಿದ್ದರೆ ಅದನ್ನು ಅನ್ಯಮಾರ್ಗದಲ್ಲಿ ತಹಬದಿಗೆ ತರಬಹುದಿತ್ತು. ಈ ರೀತಿಯಾಗಿ ಬರ್ಬರವಾಗಿ ಹತ್ಯೆ ಮಾಡಿರುವುದು ಆಕ್ಷೇಪಾರ್ಹವಾಗಿದೆ. ಆದ್ದರಿಂದ, ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ರಿಟ್ ಅರ್ಜಿಯನ್ನು ಸಲ್ಲಿಸುವಂತೆ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶಿಸಿದ್ದು, ಘಟನೆ ಬಗ್ಗೆ ಹಾಸನ ಜಿಲ್ಲೆಯ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಭಾರತದ ಪ್ರಾಣಿ ಕಲ್ಯಾಣ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಿ ಹೈಕೋರ್ಟ್ ಆದೇಶಿಸಿದೆ.