ಪೊಲೀಸರ ಕಾರಿಗೇ ಗುದ್ದಿ ಪರಾರಿಯಾದ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಡಿ ವೈ ಎಸ್ ಪಿ ಶ್ರೀಧರ್
ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವುದಕ್ಕೆ ತೆರಳಿದಾಗ ಪೊಲೀಸರ ಕಾರಿಗೇ ಗುದ್ದಿ ಪರಾರಿಯಾದ ಘಟನೆ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.
ಡಿವೈಎಸ್ಪಿ ಶ್ರೀಧರ್ ಪೂಜಾರ್ ಪೊಲೀಸರ ಕಾರಿಗೇ ಗುದ್ದಿ ಪರಾರಿಯಾದ ಆರೋಪಿ.
ಆರೋಪಿ ಶ್ರೀಧರ್ ಪೂಜಾರ್ ಜಾಮೀನು ಅರ್ಜಿ ಹಾಕಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿತ್ತು. ಜಾಮೀನು ವಜಾ ಮಾಡಿದ ಹಿನ್ನಲೆ ಪ್ರಮುಖ ಆರೋಪಿ ಬಂಧನಕ್ಕೆ ಎಸ್ಐಟಿ ತಂಡದ ಇನ್ಸ್ಪೆಕ್ಟರ್ ಅನಿಲ್ ಮತ್ತು ಅವರ ತಂಡ ಹೋಗಿದ್ದು, ಈ ಸಂದರ್ಭದಲ್ಲಿ ಪೊಲೀಸರ ವಾಹನಕ್ಕೆ ಗುದ್ದಿ ಪರಾರಿ ಆಗಿದ್ದಾರೆ. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತನಿಖೆಯನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶಿಸಿತ್ತು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಸಿಐಡಿ ಪೊಲೀಸರು, ಇಂದು ಪ್ರಕರಣದಲ್ಲಿ ಇನ್ಸ್ ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಅವರನ್ನು ಬಂಧಿಸಿದ್ದಾರೆ. ಬಂಧಿತ ಇನ್ಸ್ ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಅವರು ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು.