ಇಂದಿನಿಂದಲೇ ಆಗಸ್ಟ್ 16 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ವರೆಗೆ ನೈಟ್ ಕರ್ಫ್ಯೂ ಜಾರಿ: ದೇವಸ್ಥಾನದಲ್ಲಿ ಸೇವಾರ್ಥ ರದ್ದು – ಮಹಾಂತೇಶ್ ಬೀಳಗಿ

ದಾವಣಗೆರೆ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂವನ್ನು ಆ. 16 ರ ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಆದೇಶದಂತೆ ಆ.16 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ವರೆಗೆ ಪ್ರತಿದಿನ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆದ್ದರಿಂದ ಸಾರ್ವಜನಿಕರು ಮೂರನೇ ಅಲೆ ತಡೆಗಟ್ಟಲು ಇದಕ್ಕೆ ಸ್ಪಂದಿಸುವಂತೆ ಅವರು ತಿಳಿಸಿದ್ದಾರೆ.
ಅಲ್ಲದೇ, ಆ.31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲಾ ಮುಜರಾಯಿ ದೇವಾಲಯಗಳು ಮತ್ತು ಖಾಸಗಿ ದೇವಾಲಯಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತಾಧಿಗಳಿಗೆ ದೇವಾಲಯದ ಪ್ರವೇಶ ನೀಡಬೇಕು ಮತ್ತು ದೇವರ ದರ್ಶನಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು, ದೇವರ ಸೇವಾರ್ಥಗಳನ್ನು ನಿಷೇದಿಸಲಾಗಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದೇವರ ಉತ್ಸವ, ಸೇವೆ, ಮುಡಿ, ಪ್ರಸಾದ, ದಾಸೋಹ ಇತ್ಯಾದಿಗಳನ್ನು ನಿಷೇಧಿಸಿದ್ದು, ಶನಿವಾರ ಮತ್ತು ಭಾನುವಾರಗಳಂದು ಅರ್ಚಕರುಗಳಿಂದ ಸಾಂಪ್ರಾದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಅಂದು ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶಿಸಿರುವುದಾಗಿ ಅವರು ತಿಳಿಸಿದ್ದಾರೆ.