ಡಾ|| ಪ್ರಭಾ ಮಲ್ಲಿಕಾರ್ಜುನ್ ಪರ ಪ್ರದೀಪ್ ಈಶ್ವರ್ ಮತಯಾಚನೆ ರಾಜ್ಯದ ಚುಕ್ಕಾಣಿ ಹಿಡಿದಿರುವುದು ಕುರುಬರು: ಪ್ರದೀಪ್ ಈಶ್ವರ್

ದಾವಣಗೆರೆ : ಕರ್ನಾಟಕ ರಾಜ್ಯವನ್ನು ಕುರುಬ ಸಮುದಾಯದವರು ಆಳ್ವಿಕೆ ನಡೆಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಬುಧವಾರದಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್ ಪರ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ ಪ್ರಮುಖ ಹುದ್ದೆ ಮುಖ್ಯಮಂತ್ರಿ ಸ್ಥಾನ, ಗ್ಯಾರಂಟಿ ಯೋಜನೆಯ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ನಗರಾಭಿವೃದ್ಧಿ ಖಾತೆಯನ್ನು ವಹಿಸಿಕೊಂಡಿರುವುದು ಕುರುಬ ಸಮುದಾಯದವರು ಅಷ್ಟೇ ಅಲ್ಲ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸಹ ಕುರುಬ ಸಮುದಾಯಕ್ಕೆ ನೀಡಲಾಗಿದೆ ಇದನ್ನು ನಾವೇರೂ ಮರೆಯಬಾರದು ಎಂದರು.
ಕಾಂಗ್ರೆಸ್ ಪಕ್ಷ ಕುರುಬ ಸಮುದಾಯಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದ್ದು, ಇದನ್ನು ಪ್ರತಿಯೊಬ್ಬರು ಮನಸ್ಸಿನಲ್ಲಿಟ್ಟು ಕೊಂಡು ಮೇ.7 ರಂದು ಕಾಂಗ್ರೆಸ್ ಪಕ್ಷದ ಹಸ್ತ ಗುರುತಿಗೆ ಮತ ಚಲಾಯಿಸುವ ಮೂಲಕ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಲೋಕಸಭೆಗೆ ಕಳುಹಿಸಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.128 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದ ಅವರು ಅನೇಕ ಮಹಿಳೆಯರು ಇಂದು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುಸುತ್ತಿದ್ದಾರೆ. ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಆರ್.ನಾಗಪ್ಪ, ಡಿ.ಜಿ.ವಿಶ್ವನಾಥ್, ಶೀಲಾ ಗದಿಗೇಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.