ನಾಲ್ಕು ಬಾರಿ ಶಾಸಕನಾಗಿದ್ದೆನೆ: ಯಾವ ಖಾತೆ ಕೊಟ್ಟರು ನಿಭಾಯಿಸ್ತಿನಿ – ಅರಗ ಜ್ಞಾನೇಂದ್ರ

ಬೆಂಗಳೂರು: ಇದುವರೆಗೆ ನಾಲ್ಕು ಬಾರಿ ತೀರ್ಥಹಳ್ಳಿ ಕ್ಷೇತ್ರದ ಜನರು ನನ್ನನ್ನ ಶಾಸಕನಾಗಿ ಆಯ್ಕೆ ಮಾಡಿದ್ದು, ಈಗ ಮೊದಲ ಬಾರಿಗೆ ಸಚಿವ ಸ್ಥಾನ ಸಿಕ್ಕಿರುವುದು ಸಂತೋಷವನ್ನು ಉಂಟು ಮಾಡಿದೆ. ಯಾವ ಖಾತೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತೀರ್ಥಹಳ್ಳಿ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರಮಾಣ ವಚನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಸಂಪುಟದಲ್ಲಿ ನಾನು ಸಚಿವನಾಗಬೇಕಿತ್ತು. ಆದರೆ ಅಂದು ಸಾಧ್ಯವಾಗಲಿಲ್ಲ. ಈಗ ಮಂತ್ರಿ ಸ್ಥಾನದಕ್ಕಿದೆ. ಇಂಥಹದ್ದೇ ಖಾತೆ ಬೇಕು ಎಂದು ನಾನು ಕೇಳುವುದಿಲ್ಲ. ಯಾವ ಖಾತೆ ಕೊಟ್ಟರು ಕೂಡ ನಾನು ನಿಭಾಯಿಸುತ್ತೇನೆ ಎಂದರು.
ಬಸವರಾಜ್ ಬೊಮ್ಮಾಯಿ ಅವರು ನನಗೆ ಆತ್ಮೀಯರು.ನಾವು ಇಬ್ಬರು ಹಲವು ವರ್ಷಗಳ ಸ್ನೇಹಿತರು ಹೌದು. ನಾನು ಯಾವ ರೀತಿ ಕೆಲಸ ಮಾಡುತ್ತೇನೆ ಅನ್ನುವುದು ಅವರಿಗೆ ಗೊತ್ತಿದೆ. ಅದಕ್ಕೆ ತಕ್ಕಂತೆ ನನಗೆ ಯಾವ ಖಾತೆ ಕೊಟ್ಟರೆ ಕೆಲಸ ಮಾಡಬಹುದು ಅನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
ಈಗ ರಾಜ್ಯದ ಜನರ ಸೇವೆ ಮಾಡುವ ಭಾಗ್ಯ ಒದಗಿದ್ದು, ಖಂಡಿತವಾಗಿ ಎಲ್ಲರಿಗೂ ನ್ಯಾಯ ಸಿಗುವ ರೀತಿ ಕೆಲಸ ಮಾಡುತ್ತೇನೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಬದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದರು.