ಸಂಚಾರಿ ಕುರುಬರಿಗೆ ಅರಣ್ಯ ಇಲಾಖೆಯಿಂದ ತೊಂದರೆ: ಕುರುಬ ಸಮಾಜದ ಮುಕುಡಪ್ಪ
ದಾವಣಗೆರೆ: ಸಂಚಾರಿ ಕುರುಬರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ತೊಂದರೆ ಆಗುತ್ತಿದೆ ಎಂದು ಕುರುಬ ಸಮಾಜದ ಮುಖಂಡ ಮುಕುಡಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 18 ಲಕ್ಷ ಸಂಚಾರಿ ಕುರಿಗಾಹಿಗಳಿದ್ದು, ಅವರು ಕಾಡುಮೇಡುಗಳಲ್ಲಿಯೇ ಟೆಂಟು ಹಾಕಿ ವಾಸ್ತವ್ಯ ಹೂಡುತ್ತಾರೆ. ಆದರೆ, ಈಗ್ಗೆ ಕಳೆದ ಕೆಲವು ದಿನಗಳಿಂದ ಹೊಸಪೇಟೆ, ಉಜ್ಜಯಿನಿಯಲ್ಲಿ ಬೀಡುಬಿಟ್ಟಿದ್ದ ಅವರುಗಳಿಂದ ಬೆಳೆಗಳಿಗೆ ಹಾನಿಯಾಗಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆ ಮಾಡುತ್ತಿರುವುದರಿಂದ ಅರಣ್ಯ ನಾಶ ಆಗುತ್ತಿದೆ ಹೊರತು ಸಂಚಾರಿ ಕುರಿಗಾಹಿಗಳಿಂದಲ್ಲ. ಸಂಚಾರ ಮಾಡುವ ಕುರಿಗಾಹಿಗಳಿಗೆ ತೊಂದರೆ ಕೊಡದಂತೆ ಅರಣ್ಯ ಇಲಾಖೆಗೆ ಅವರು ಆಗ್ರಹಿಸಿದರು.
ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ಕುರುಬ ಸಮಾಜದಲ್ಲಿ ಶೇ.30 ರಷ್ಟು ಸಂಚಾರಿ ಕುರುಬರಿದ್ದಾರೆ. ಆದರೆ, ಅವರಿಗೆ ಸರ್ಕಾರದ ಯಾವ ಸೌಲಭ್ಯಗಳು ದಕ್ಕುತ್ತಿಲ್ಲ. ಕುರಿಗಳು ಸಾವು ಕಂಡರೂ ಪರಿಹಾರ ಸಿಗುತ್ತಿಲ್ಲ. ಯಾವ ಬ್ಯಾಂಕು ಸಾಲ ಕೋಡುವುದಿಲ್ಲ. ಆದ್ದರಿಂದ ಅವರೆಲ್ಲರೂ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದರು.
ರಾಜ್ಯದಲ್ಲಿ 1.50 ಕೋಟಿ ಕುರಿಗಳಿದ್ದು, ಅದರಲ್ಲಿ 1.20 ಕೋಟಿ ಕುರಿಗಳು ಸಂಚಾರಿ ಕುರುಬರ ಹತ್ತಿರ ಇವೆ. ಅವರೇನಿದ್ದರೂ ಕಾಡಲ್ಲಿಯೇ ವಾಸ ಇರುತ್ತಾರೆ. ಬೆಳಗಾವಿ, ಆಂಧ್ರ, ಮಹಾರಾಷ್ಟ್ರದಿಂದ ಬಂದಿದ್ದಾರೆ ಅಲ್ಲಿನ ಅರಣ್ಯ ಇಲಾಖೆಯವರು ಟೆಂಟ್ ಕಿತ್ತುಹಾಕಿ ತೊಂದರೆ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವ ಸಂಚಾರಿ ಕುರಿಗಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ 2009 ರಿಂದ ಮೂರ‍್ನಾಲ್ಕು ಬಾರಿ ಕುರಿಗಾಹಿ ಸಮಾವೇಶ ಮಾಡಿದ್ದೆವು. ಕೆಟಗರಿ 1 ರಲ್ಲಿ ಅವರನ್ನು ಸೇರಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಇದುವರೆಗೂ ಸರ್ಕಾರ ಅವರತ್ತ ಗಮನಹರಿಸಿಲ್ಲ ಎಂದು ಹೇಳಿದರು.