ಪಿಓಪಿ ಗಣೇಶನ ವಿಗ್ರಹಗಳ ತಯಾರಿಕೆ, ಮಾರಾಟ ನಿಷಿದ್ದ; ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ; ಸೆಪ್ಟೆಂಬರ್ 7 ರಂದು ಸಡಗರ ಹಾಗೂ ಸಾಂಪ್ರದಾಯಿಕವಾಗಿ ಗೌರಿ, ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ವೇಳೆ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗಣೇಶನ ವಿಗ್ರಹ ತಯಾರಿಸುವುದು ಮತ್ತು ಮಾರಾಟ ಮಾಡುವುದು ರಾಜ್ಯಾದ್ಯಂತ ನಿಷಿದ್ದವಾಗಿದ್ದು ಪರಿಸರ ಸ್ನೇಹಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಲೇಪಿತ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡುವ ಮೂಲಕ ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿಯೇ ಪ್ರತಿಷ್ಟಾಪನೆ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸಿ, ಈ ದಿನಗಳಲ್ಲಿ ಧ್ವನಿವರ್ಧಕ, ಡೋಲು, ತಮ್ಮಟೆ, ಜಾಗಟೆ, ಹಸಿರು ಪಟಾಕಿಯನ್ನು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ಅವಧಿಯಲ್ಲಿ ಬಳಸಬಾರದು. ಮತ್ತು ರಸ್ತೆ ಮತ್ತು ಚರಂಡಿಗಳಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆಗಳನ್ನು ಎಸೆಯಬೇಡಿ, ಮನೆಯ ಹತ್ತಿರ ಬರುವ ಸ್ಥಳೀಯ ಸಂಸ್ಥೆಗಳ ಕಸದ ವಾಹನಗಳಿಗೆ ನೀಡಬೇಕು.
ಹಾಗೂ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಹಸಿ ಕಸ ಇದರಲ್ಲಿ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಗಧಿಪಡಿಸಿದ ಸಂಚಾರಿ ತೊಟ್ಟಿಗಳಲ್ಲಿಯೇ ವಿಸರ್ಜನೆ ಮಾಡಬೇಕೆಂದು ತಿಳಿಸಿದ್ದಾರೆ