ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಸಮಾಜಸೇವಕ ಕೆ.ಎಸ್‌.ರಾಜಣ್ಣರಿಗೆ ಬೆಂವಿವಿ ಗೌರವ ಡಾಕ್ಟರೇಟ್; ಬೆಂವಿವಿ ಘಟಿಕೋತ್ಸವಕ್ಕೆ ರಾಜ್ಯಪಾಲರು ಗೈರು

Bengaluru university doctorate

ಬೆಂಗಳೂರು: ಕಲೆ,ಸಂಗೀತ ಕ್ಷೇತ್ರದ ಸಾಧನೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಕ್ರೀಡೆ,ಸಮಾಜ ಸೇವೆ ಕ್ಷೇತ್ರದಲ್ಲಿನ ಸಾಧನೆಗೆ ಕೆ.ಎಸ್.ರಾಜಣ್ಣ ರಾಜ್ಯ ಮಾಜಿ ಆಯುಕ್ತರು,ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ, ಕರ್ನಾಟಕ ಸರ್ಕಾರ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಡಾ.ಜಯಕರ ಎಸ್ ಎಂ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ 59ನೇ ಘಟಿಕೋತ್ಸವದ ಕುರಿತು ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ” ಬೆಂಗಳೂರು ವಿಶ್ವವಿದ್ಯಾಲಯದ 59 ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ,ಮತ್ತು ಸಹ-ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ವಹಿಸಲಿದ್ದಾರೆ.ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಉಪಾಧ್ಯಕ್ಷರು ಮತ್ತು ಅಧ್ಯಕ್ಷರು ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್,ನವದೆಹಲಿ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವದಲ್ಲಿ 26,210 ವಿದ್ಯಾರ್ಥಿಗಳ ಪದವಿಗೆ ಅರ್ಹರಾಗಿದ್ದಾರೆ.158 ವಿದ್ಯಾರ್ಥಿಗಳು 308 ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ.79 ನಗದು ಪ್ರಶಸ್ತಿ ಮತ್ತು 140 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಸ್ವೀಕರಿಸಲಿದ್ದಾರೆ.ಈ ಬಾರಿಯೂ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದು 14,063 ವಿದ್ಯಾರ್ಥಿನಿಯರು,12,007 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.

ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಅನ್ನಪೂರ್ಣ. ಎಸ್ ಒಟ್ಟು 9 ಚಿನ್ನದ ಪದಕ ಗಳಿಸುವ ಮೂಲಕ ಅತಿ ಹೆಚ್ಚು ಪದಕ ಗಳಿಸಿದ್ದಾರೆ.ಸ್ನಾತಕ ಪದವಿ ವಿಭಾಗದಲ್ಲಿ ಅನುರಾಧ ಎಂ. ಬಿಎಸ್ಸಿ 9 ಚಿನ್ನದ ಪದಕ ಗಳಿಸಿದ್ದಾರೆ.

ರಮ್ಯ ಜೆ, ರಮ್ಯ ಎಂ.ಪಿ, ವಿಶಾಲಾಕ್ಷಿ ವೈ.ಬಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು.ಪ್ರೀತಾ.ವಿ ಮತ್ತು ಪೂಜಾ ಪಿ ವರ್ಷದ ಅತ್ಯುತ್ತಮ ಕ್ರೀಡಾಪಟು 2022-23 ಪ್ರಶಸ್ತಿ ಸ್ವೀಕರಿಸಲಿದ್ದಾರೆ.

*ಘಟಿಕೋತ್ಸವಕ್ಕೆ ರಾಜ್ಯಪಾಲರು ಗೈರು*

ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಸಮಾರಂಭಕ್ಕೆ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಪತಿಗಳಾಗಿರುವ ಥಾವರ್‌ಚಂದ್ ಗೆಹ್ಲೋಟ್ ಗೈರಾಗಲಿದ್ದು,ರಾಜಭವನದಿಂದ ಅಧಿಕೃತ ಮಾಹಿತಿ ನೀಡಿದ್ದಾರೆ.ಗೌರವಾನ್ವಿತ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕುಲಪತಿ ಡಾ‌.ಜಯಕರ ಎಸ್ ಎಂ ತಿಳಿಸಿದರು.

*ಸಿಂಡಿಕೇಟ್ ಸದಸ್ಯರಿಗೆ ಹೈಕೋರ್ಟ್ ತಡೆ ವಿಚಾರ*

ಬೆಂಗಳೂರು ವಿಶ್ವವಿದ್ಯಾಲಯದ ಮೂರು ಜನ ಸಿಂಡಿಕೇಟ್ ಸದಸ್ಯರಿಗೆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಹೈಕೋರ್ಟ್ ತಡೆ ನೀಡಿದ್ದು ವಿಶ್ವವಿದ್ಯಾಲಯಕ್ಕೂ ಸೂಚನೆ ನೀಡಲಾಗಿದೆ.ಹೈಕೋರ್ಟ್ ಆದೇಶವನ್ನು ನಾವು ಪಾಲಿಸುತ್ತೇವೆ.ತಡೆ ಹಿಡಿಯಲಾದ 3 ಜನ ಸಿಂಡಿಕೇಟ್ ಸದಸ್ಯರು ಘಟಿಕೋತ್ಸವದಲ್ಲಿ ಭಾಗಿಯಾಗುವುದಿಲ್ಲ ಎಂದು ಕುಲಪತಿ ಡಾ.ಜಯಕರ ಎಸ್ ಎಂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಶೇಕ್ ಲತೀಫ್ ಕೆ.ಎ.ಎಸ್., ಮೌಲ್ಯಮಾಪನ ಕುಲಸಚಿವರಾದ ಡಾ.ಶ್ರೀನಿವಾಸ್ ಸಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!