ದಾವಣಗೆರೆ ಜಿಲ್ಲೆಯ ಇಬ್ಬರು ನಕಲಿ ವೈದ್ಯರಿಗೆ ತಲಾ ಲಕ್ಷ ರೂ.ಗಳ ದಂಡ, ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ

ದಾವಣಗೆರೆ; ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ನಕಲಿ ವೈದ್ಯ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಿ ತಲಾ ಲಕ್ಷ ರೂ.ಗಳ ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ 57 ವರ್ಷದ ಶ್ರೀನಿವಾಸ್  ತಂದೆ ತಿಮ್ಮಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ಶೀನಪ್ಪಗೌಡ ಎಂಬುವರ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಶ್ರೀ ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಎಂದು ಪರವಾನಗಿ ಪಡೆದು ಜೊತೆಗೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು.
ಇವರು ಪಡೆದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಪಡಿಸಿ ಒಂದು ಲಕ್ಷ ದಂಡ ವಿಧಿಸಲಾಗಿದೆ. ಮತ್ತೊಬ್ಬ ನಕಲಿ ವೈದ್ಯ ಹಿರೇಕೇರೂರು ತಾಲ್ಲೂಕಿನ ಹಿರೇ ಮರಬ ಗ್ರಾಮದ 45 ವರ್ಷದ ಲಕ್ಷ್ಮಣ ಬಿನ್ ಫಕ್ಕೀರಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ  ಗ್ರಾಮದಲ್ಲಿ ದೇವಸ್ಥಾನದ ಹತ್ತಿರ ಬಸವನಗೌಡ ಎಂಬುವರಿಂದ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು. ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಈ ನಕಲಿ ಕ್ಲಿನಿಕ್ ಗಳ ಬಗ್ಗೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಾಜರು ಮಾಡಿ ಸಮಗ್ರ ವರದಿ ನೀಡಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿಯೊಂದಿಗೆ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!