ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಲೋಕಾರ್ಪಣೆ ಮಧ್ಯ ಕರ್ನಾಟಕದ ಜನರ ಆರೋಗ್ಯ ಕಾಪಾಡಲು ಚಿಗಟೇರಿ ಆಸ್ಪತ್ರೆ ಮರುಸ್ಥಾಪನೆಗೆ ಮಾಸ್ಟರ್ ಪ್ಲಾನ್,
ದಾವಣಗೆರೆ: ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕ್ಲಿನಿಕಲ್ ವಿಭಾಗದಲ್ಲಿ ಗ್ರೂಪ್ ಡಿ ಸೇವೆ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇರ ಪಾವತಿಯಡಿ ನೇಮಕ ಮಾಡಿಕೊಳ್ಳಲು ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಸಾಧಕ, ಬಾದಕಗಳ ಪರಿಶೀಲನೆ ನಂತರ ಹೊರಗುತ್ತಿಗೆಯ ಎಲ್ಲಾ ಗ್ರೂಪ್ ಡಿ ಸಿಬ್ಬಂದಿಗಳನ್ನು ನೇರಪಾವತಿಯಡಿ ಪಡೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಬುಧವಾರ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಮಾಡಿರುವ 200 ಹಾಸಿಗೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‍ನ್ನು ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು. ದಾವಣಗೆರೆಯಲ್ಲಿನ ಚಿಗಟೇರಿ ಆಸ್ಪತ್ರೆ ವಿಶಾಲವಾದ ಸ್ಥಳದಲ್ಲಿದ್ದು 70 ವರ್ಷದ ಹಳೆಯದಾಗಿದೆ. ಇಲ್ಲಿ ಹೊಸ ಕಟ್ಟಡ, ದುರಸ್ಥಿಯಾಗಬೇಕಾಗಿದ್ದು ಮಧ್ಯ ಕರ್ನಾಟಕದಲ್ಲಿನ ಈ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ಮೂಲಕ ಈ ಭಾಗದಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಇಲ್ಲಿನ ಮೂಲಭೂತ ಸೌಕರ್ಯಕ್ಕೆ ಮತ್ತು ಹೊಸ ಬ್ಲಾಕ್ ನಿರ್ಮಾಣಕ್ಕೆ ರೂ.17 ಕೋಟಿ ಬಿಡುಗಡೆ ಮಾಡಲಾಗಿದ್ದು ಭವಿಷ್ಯದ ದೃಷ್ಟಿಯಿಂದ ನೂತನ ಯೋಜನೆಯನ್ನು ಸಿದ್ದಪಡಿಸಿ ಅದರಂತೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ರೂ. 30 ಕೋಟಿಯಲ್ಲಿ ನಿರ್ಮಿಸಲಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 200 ಹಾಸಿಗೆ ಸಾಮಥ್ರ್ಯವಿದ್ದು ಇಲ್ಲಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಮಂಜೂರು ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು ಇಲ್ಲಿಗೆ ಬೇಕಾಗಿರುವ ವೈದ್ಯರು ಹಾಗೂ ಸಿಬ್ಬಂದಿಗಳ ಹುದ್ದೆಗಳಿಗೆ ಮಂಜೂರಾತಿಯನ್ನು ನೀಡಲಾಗುತ್ತದೆ. ಟ್ರಾಮಾ ಕೇರ್ ಸೆಂಟರ್‍ಗೂ ಸಿಬ್ಬಂದಿಗಳ ಅಗತ್ಯವಿದ್ದು ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತದೆ. ಆಸ್ಪತ್ರೆ ಕಟ್ಟಿದರೆ ಸಾಲದು, ಇಲ್ಲಿ ಅಗತ್ಯವಿರುವ ಪರಿಕರ, ಸಿಬ್ಬಂದಿಗಳು ಇದ್ದಾಗ ಮಾತ್ರ ಜನರಿಗೆ ಆರೋಗ್ಯ ಸೇವೆ ಸಿಗಲು ಸಾಧ್ಯವಿದೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಆದರೆ ಇವುಗಳಿಗೆ ಸಿಗಬೇಕಾದ ಆದ್ಯತೆ ಸಾಕಾಗುತ್ತಿಲ್ಲ. ಜನರ ಆರೋಗ್ಯ ಸಂರಕ್ಷಣೆ ಮಾಡಿದಾಗ ಆರೋಗ್ಯವಂತ ನಾಗರಿಕನಾಗಲು ಸಾಧ್ಯ, ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆರೋಗ್ಯವು ಗ್ಯಾರಂಟಿ ಯೋಜನೆಯಾಗಬೇಕು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕಾಗಿದೆ ಎಂದರು.
ಮಾಯಕೊಂಡ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದರೂ ಸಮುದಾಯ ಆರೋಗ್ಯ ಕೇಂದ್ರವಿರುವುದಿಲ್ಲ. ಮುಂದಿನ ದಿನಗಳಲ್ಲಿ ಮಾಯಕೊಂಡಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಲಾಗುತ್ತದೆ. ಮೂಲಭೂತ ಸೌಕರ್ಯ ಕೊಟ್ಟರೆ ಸಾಕಾಗುವುದಿಲ್ಲ, ವೈದ್ಯರು ಜನರ ಸೇವೆ ಮಾಡಬೇಕು. ವೈದ್ಯಕೀಯ ಸೇವಾ ಕ್ಷೇತ್ರವಾಗಿದ್ದು ಸಹಾನುಭೂತಿಯಿಂದ ಎಲ್ಲಾ ವೈದ್ಯರು ಕೆಲಸ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ವೈದ್ಯರು, ಸಿಬ್ಬಂದಿಗಳ ಸೇವೆ ಜನರಿಗೆ ಸಿಗುವಂತಾಗಬೇಕೆಂದರು.
ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಆಸ್ಪತ್ರೆ ಕಟ್ಟಡದ ಜೊತೆಗೆ ಸಲಕರಣೆಗಳು ಇರಬೇಕಾಗುತ್ತದೆ, ಜೊತೆಗೆ ಸಿಬ್ಬಂದಿಗಳು ಇರಬೇಕು, ಇಲ್ಲವಾದಲ್ಲಿ ವ್ಯರ್ಥವಾಗುತ್ತದೆ. ಚಿಗಟೇರಿ ಆಸ್ಪತ್ರೆಯಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದೆ. ಇಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ಜನರಿಗೆ ಸಿಗುವಂತಾಗಬೇಕು. ಇಲ್ಲಿ ನರ್ಸ್, ಆಯಾಗಳ ಕೊರತೆ ಇದೆ ಎಂದು ತಿಳಿದುಬಂದಿದ್ದು ವ್ಯವಸ್ಥೆ ಸರಿಪಡಿಸಬೇಕು. ಹೊರಗುತ್ತಿಗೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರಪವಾತಿಯಡಿ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪಡೆಯುವಂತಾಗಬೇಕು. ಸಾರ್ವಜನಿಕ ಸೇವೆ ಮಾಡುವಾಗ ಬಹಳ ಪಾರದರ್ಶಕವಾಗಿ ಕೆಲಸ ಮಾಡಬೇಕಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಖಾಸಗಿಯಾಗಿ 8 ಕೋಟಿವರೆಗೆ ವೆಚ್ಚ ಮಾಡಲಾಗಿದೆ ಎಂದರು.
ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಚಿಗಟೇರಿ ಆಸ್ಪತ್ರೆಯ ಸ್ಥಿತಿಗತಿ ಗೊತ್ತಿದೆ. ಇಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಜೊತೆಗೆ ಸುಧಾರಣೆಯಾಗಬೇಕಿದೆ. ಮಾಸ್ಟರ್ ಪ್ಲಾನ್ ತಯಾರಿಸುವ ಮೂಲಕ ಹಂತ ಹಂತವಾಗಿ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾನವ ಹಾಲು ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಇನ್ನಷ್ಟು ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿದೆ, ಇದಕ್ಕೆ ಮಾನವ ಸಂಪನ್ಮೂಲ ಕಲ್ಪಿಸಬೇಕು. ಸಿಬ್ಬಂದಿಗಳು ಸಹ ಉಪಕರಣಗಳನ್ನು ನಿಷ್ಕ್ರಿಯೆಗೊಳಿಸದೇ ಉಪಯುಕ್ತ ಮಾಡಿಕೊಳ್ಳಬೇಕು. ಐಸಿಯು ಬೆಡ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಶವಗಾರಕ್ಕೆ ಕಾಯಕಲ್ಪ ಮಾಡಬೇಕಾಗಿದ್ದು ಅತ್ಯುತ್ತಮವಾಗಿ ಕೆಲಸ ಮಾಡುವ ಡಾ; ಮೋಹನ್ ರವರನ್ನು ಸನ್ಮಾನಿಸಿ ಗೌರವಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮೇಯರ್ ಕೆ.ಚಮನ್‍ಸಾಬ್, ದೂಡಾ ಆಧ್ಯಕ್ಷ ಕೆ.ದಿನೇಶ್ ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ್ ಕೆ.ಬಿ, ಅಭಿಯಾನ ನಿರ್ದೇಶಕರಾದ ಡಾ; ನವೀನ್ ಭಟ್ ರೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.