Hoardings Flex: ದಾವಣಗೆರೆ ನಗರದಲ್ಲಿ ಅನಧಿಕೃತ ಜಾಹಿರಾತು/ಫಲಕ – ಪಾಲಿಕೆ ಆಯುಕ್ತರಿಗೆ ಖಾರವಾಗಿ ಪತ್ರ ಬರೆದ ಜಿಲ್ಲಾಧಿಕಾರಿ

Hoardings Flex_ Davangere Unauthorized Advertisement_Board - Collector Writes Scorching Letter to Corporation Commissioner

ದಾವಣಗೆರೆ: (Hoardings Flex)  ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಲವು ಸರ್ಕಾರಿ ಜಾಗ, ಪಾರ್ಕ್, ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ಯಾವ ಪರವಾನಿಗೆ ಇಲ್ಲದೇ ಬೃಹತ್ತಾದ ಜಾಹಿರಾತು ಹೋರ್ಡಿಂಗ್ಸ್ ಅಳವಡಿಸುತ್ತಿದ್ದಾರೆ. ಈ ಬಗ್ಗೆ ಪಾಲಿಕೆ ಆಯವ್ಯಯದ ಸಭೆಯಲ್ಲಿ ವಿಶ್ವ ಕಾರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಕೆಜಿ ಎಲ್ಲಪ್ಪ ವಿಷಯ ಪ್ರಸ್ತಾಪಿಸಿದ್ದರು, ಅಲ್ಲದೆ ಕೆಲ ಸಂಘಟನೆಯ ಮುಖಂಡರು ಅಕ್ರಮವಾಗಿ ಜಾಹಿರಾತು ಹೋರ್ಡಿಂಗ್ಸ್ ನಿರ್ಮಾಣದ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು ಇದರ ಬಗ್ಗೆ ಗರುಡವಾಯ್ಸ್ ಸುದ್ದಿ ಬಿತ್ತರಿಸಿತ್ತು, ಇದೀಗ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ರವರು ಪಾಲಿಕೆ ಆಯುಕ್ತರಿಗೆ ಖಾರವಾಗಿ ಪತ್ರ ಬರೆದಿದ್ದಾರೆ.

ಜಿಲ್ಲಾಧಿಕಾರಿ ಬರೆದ ಪತ್ರದಲ್ಲಿ ಏನಿದೆ.?

ದಾವಣಗೆರೆ ಮಹಾನಗರಪಾಲಿಕೆ ಮತ್ತು ಸ್ಮಾರ್ಟ ಸಿಟಿ ಲಿ., ಸಹಯೋಗದೊಂದಿಗೆ ನೂರಾರು ಕೋಟಿ ವೆಚ್ಚ ಮಾಡಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ, ರಸ್ತೆ, ಪಾದಚಾರಿ ಮಾರ್ಗ, ಗಿಡ ನೆಡುವುದು, STP, Bus Stand ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಮನ್ನಣೆಗಳಿಸಿದೆ ಮತ್ತು ಆನೇಕ ಪ್ರಶಸ್ತಿಗಳನ್ನು ಸಹಗಳಿಸಿದೆ.

ನಾನು ಅಧಿಕಾರ ವಹಿಸಿಕೊಂಡ ನಂತರ ದಾವಣಗೆರೆ ನಗರಾಭಿವೃದ್ಧಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಸಂಸದರು ಹಾಗೂ ಮಾನ್ಯ ಹಿರಿಯ ಶಾಸಕರುಗಳ ಸೂಚನೆ ಮೇರೆಗೆ ಮತ್ತು ಅವರುಗಳ ಅಶಯದಂತೆ ಆನೇಕ ಕ್ರಿಯಾ ಯೋಜನೆ ರೂಪಿಸಿ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ನಿಮಗೆಲ್ಲ ತಿಳಿದ ವಿಷಯವಾಗಿದೆ.

ದಿನಾಂಕ 12.01.2025 ರಂದು ಕರ್ನಲ್ ರವೀಂದ್ರನಾಥ್ ವೃತ್ತದಲ್ಲಿ ಅನಧಿಕೃತ ವ್ಯಕ್ತಿಗಳು ಮಹಾನಗರ ಪಾಲಿಕೆ ಮತ್ತು ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಾರದೇ, ಅನುಮತಿ ಪಡೆಯದೇ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ Hoardings & ಫ್ಲಕ್ಸ್ ಗಳನ್ನು ಅಳವಡಿಸುವುದರ ಮೂಲಕ ಅದರಲ್ಲೂ ಪಾದಚಾರಿ ಮಾರ್ಗ ಮತ್ತು ಪಾರ್ಕ್‌ನ ಸೌಂದರ್ಯಕ್ಕೆ ದಕ್ಕೆ ತಂದಿರುತ್ತಾರೆ. ಈ ಬಗ್ಗೆ ನಾನು ನಿಮ್ಮನ್ನು ಸಂಪರ್ಕಿಸಿ ಇವುಗಳನ್ನು ತೆರವುಗೊಳಿಸುವುದು ಹಾಗೂ ಅನಧಿಕೃತವಾಗಿ ನಿರ್ಮಿಸಿರುವವರ ಮೇಲೆ FIR ದಾಖಲಿಸಲು ಸೂಚನೆ ನೀಡಿರುತ್ತೇನೆ.

ಸದರಿ ವಿಷಯಗಳಿಗೆ ಸಂಬಂಧಿಸಿದಂತೆ, ಗೌರವಾನ್ವಿತ ನ್ಯಾಯಾಲಯಗಳಲ್ಲಿ ಸಾರ್ವಜನಿಕ ರಸ್ತೆ ಮತ್ತು ಇತರೆ ಸ್ಥಳಗಳಲ್ಲಿ Karnataka Disfigurement Act ಅಡಿ ಕಾನೂನು ಬಾಹಿರವಾಗಿ ಯಾವುದೇ ಕಟ್ಟಡ ನಿರ್ಮಿಸುವುದು ಮತ್ತು ಅನಧಿಕೃತ ಕೆಲಸಗಳನ್ನು ಮಾಡಬಾರದೆಂದು ಆದೇಶಗಳನ್ನು ನೀಡಿರುವುದು ತಮಗೆ ತಿಳಿದಂತ ವಿಷಯವಾಗಿದೆ ಎಂದು ಅಂದುಕೊಂಡಿರುತ್ತೇನೆ.

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯವು BBMPಗೆ ಸಂಬಂಧಿಸಿದಂತೆ Hoardings ಮತ್ತು ಜಾಹಿರಾತುಗಳನ್ನು ಪ್ರಚುರ ಪಡಿಸುವ ಬಗ್ಗೆ ಮತ್ತು ಅಕ್ರಮ ಜಾಹಿರಾತುಗಳನ್ನು ನಿಯಂತ್ರಣ ಮಾಡುವ ಸಂಬಂಧ ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆಗೆ ಆದೇಶ ನೀಡಿರುವುದು ತಮಗೆ ಗೊತ್ತಿದೆ ಎಂದು ಭಾವಿಸಿರುತ್ತೇನೆ.
ಈ ಸಂಬಂಧ ಗೌರವಾನ್ವಿತ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರವರುಗಳು ಅನೇಕ ಸೂಚನೆ ಮತ್ತು ಆದೇಶಗಳನ್ನು ಸರ್ಕಾರಕ್ಕೆ ಮತ್ತು ನಗರಾಭಿವೃದ್ಧಿ ಇಲಾಖೆ ನೀಡಿರುತ್ತದೆ ಹಾಗೂ ಕೆಲವೊಂದು ಪ್ರಕರಣಗಳು ವಿಚಾರಣೆ ಹಂತದಲ್ಲಿರುತ್ತದೆ.

ದಾವಣಗೆರೆ ನಗರದಲ್ಲಿನ ಕರ್ನಲ್ ಎಂ.ಬಿ.ರವೀಂದ್ರನಾಥ್ ವೃತ್ತ, ಶಾರದಾಂಬಾ ವೃತ್ತ, ಲಕ್ಷ್ಮೀ ಫೋರ್ ಮಿಲ್, ಶಾಬನೂರು ರಸ್ತೆ, ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಅರಸು ಸರ್ಕಲ್, ಆಶೋಕ ಥಿಯೇಟರ್, ನರಸರಾಜ ರಸ್ತೆ, ಮಹಾನಗರಪಾಲಿಕೆ ಹತ್ತಿರ, ಅರುಣ ಸರ್ಕಲ್ ಹಾಗೂ ಇತರೆಡೆಗಳಲ್ಲಿ ಯಾವುದೇ ಪರವಾನಿಗೆ ಮತ್ತು ಅನುಮತಿ ಪಡೆಯದೆ ಅನಧಿಕೃತ ಫ್ಲೆಕ್ಸ್ ಮತ್ತು ಹೊಲ್ಡಿಂಗ್ಸ್ ನಿರ್ಮಿಸಿದ್ದು ಇವುಗಳಿಂದ ಮಹಾನಗರಪಾಲಿಕೆಗೆ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಬಹಳ ಗಂಭೀರ ವಿಷಯವಾಗಿರುತ್ತದೆ. ಅಲ್ಲದೇ, ನಗರ ಸೌಂದರ್ಯ ಹಾಳಾಗಿರುತ್ತದೆ ಮತ್ತು ಹಸಿರು ನ್ಯಾಯಾಧಿಕರಣದ ಆದೇಶಗಳನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡುವುದು ಹಾಗೂ ಕೆಲವು ಕಡೆ ಜಾಹಿರಾತು ಫಲಕ ಅಳವಡಿಸಲು ಮರಗಳನ್ನು ಕಡಿಯುತ್ತಿರುವುದು ಸಹ ವರದಿಯಾಗಿರುತ್ತದೆ. ಇಂತಹವರುಗಳ ಮೇಲೆ ಅರಣ್ಯ ಕಾಯಿದೆಯಡಿ ಮೊಕದ್ದಮೆ ದಾಖಲಿಸಿ ಕ್ರಮವಹಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಸಹ ಸೂಚಿಸಿದೆ.

ಆದ್ದರಿಂದ, ಈ ಪತ್ರ ತಲುಪಿದ 15 ದಿವಸದೊಳಗಾಗಿ ನಗರದಲ್ಲಿ ಮತ್ತು ಇತರೆಡೆಗಳಲ್ಲಿ ಅನಧಿಕೃತವಾಗಿ ಸಾರ್ವಜನಿಕ ಪಾದಾಚಾರಿ ಮಾರ್ಗ, ಸರ್ಕಲ್ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಅನಧಿಕೃತ ಫ್ಲಕ್ಸ್ ಮತ್ತು Hoardingsಗಳ ವಿವರಗಳನ್ನು ಮತ್ತು ಅವುಗಳನ್ನು ತೆರವುಗೊಳಿಸಿರುವ ಛಾಯಚಿತ್ರಗಳೊಂದಿಗೆ ವರದಿಸುವುದು ಮತ್ತು ಈಗಾಗಲೇ ಅನಧಿಕೃತವಾಗಿ ನಿರ್ಮಿಸಿರುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮವಹಿಸುವುದು ಮತ್ತು ಅವರಿಂದ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಿ ವಸೂಲಿ ಮಾಡುವುದು ಈ ಕ್ರಮ ಆಗದಿದ್ದಲ್ಲಿ ಸಂಬಂಧಿಸಿದವರ ಮೇಲೆ ಸಂಬಂಧಿಸಿದ ಪ್ರಾಧಿಕಾರದಲ್ಲಿ ತಕ್ಷಣ ದೂರು ದಾಖಲಿಸಿ ಈ ಕಛೇರಿಗೆ ವರದಿ ಸಲ್ಲಿಸುವುದು ಹಾಗೂ ಇಂತಹ ಅನಧಿಕೃತ ವ್ಯಕ್ತಿಗಳಿಗೆ ಅನುಮತಿ ಮತ್ತು ಸಹಕರಿಸಿದ ಸರ್ಕಾರಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಇಲಾಖಾ ವಿಚಾರಣೆ ನಡೆಸಲು ಕ್ರಮವಹಿಸಲು ತಿಳಿಸಿದೆ.
ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಪತ್ರವನ್ನು ಬರದಿದ್ದಾರೆ.

ಆಯುಕ್ತರಿಗೆ ಬರೆದ ಪತ್ರದ ಪ್ರತಿಗಳನ್ನು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ, ದಾವಣಗೆರೆ ಲೋಕಾಯುಕ್ತ ಪೋಲಿಸ್ ಅಧಿಕ್ಷಕರಿಗೆ, ದಾವಣಗೆರೆ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ, ದಾವಣಗೆರೆ ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕರಿಗೆ, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ, ಹರಿಹರ ನಗರಸಭೆ ಪೌರಾಯುಕ್ತರಿಗೆ ದಾವಣಗೆರೆ ಜಿಲ್ಲಾಧಿಕಾರಿಗಳು ಕಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!