ಲಿಂಗ ತಾರತಮ್ಯ ಮತ್ತು ಲಿಂಗ ಭೇದವನ್ನ ನಿವಾರಿಸುವ ಪ್ರಯತ್ನಗಳಾಗಬೇಕು – ಶ್ರೀಮತಿ ಗಾಯಿತ್ರಿ ಸಿ ಎಸ್.

ಚಿತ್ರದುರ್ಗ: ಮಹಿಳಾ ದಿನಾಚರಣೆಗಳಲ್ಲಿ ಬರೀ ಮಹಿಳೆಯರೇ ಭಾಗವಹಿಸಬೇಕೆಂಬುದಿಲ್ಲ, ಅದರಲ್ಲಿ ಪುರುಷರು ಸಹ ಭಾಗವಹಿಸಿ, ಮಹಿಳೆಯರ ಸಮಸ್ಯೆಗಳನ್ನ ಅರಿತು ನಿವಾರಿಸುವ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಬೇಕು. ಸರ್ಕಾರದ ಹಲವಾರು ಯೋಜನೆಗಳು ಮಹಿಳೆಯರ ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಬಲಿಷ್ಠವಾಗಿವೆ, ಅವುಗಳನ್ನ ತೀರ್ವಗತಿಯಲ್ಲಿ ಅನುಷ್ಠಾನಗೊಳಿಸಬೇಕು. ಈ ಕ್ರಿಯೆಯನ್ನು ವೇಗಗೊಳಿಸಿ ಎಂಬುದೇ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷಣೆಯಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾ ಅಧಿಕಾರಿಗಳಾದ ಶ್ರೀಮತಿ ಸಿ. ಎಸ್. ಗಾಯತ್ರಿಯವರು ಮಾತನಾಡಿದರು.
ಅವರು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಚರಕ ತಿರುಗಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆಯರು ತಮ್ಮ ಬಗ್ಗೆ ಇರುವ ಕೀಳರಿಮೆ ನಿವಾರಿಸಿಕೊಂಡು, ಪುರುಷರ ಜೊತೆ ಸಮನಾಗಿ, ಸ್ಥಾನಗಳನ್ನ ಅಲಂಕರಿಸುವ ಮತ್ತು ಅಧಿಕಾರವನ್ನು ಚಲಾಯಿಸುವ ಪ್ರಯತ್ನಗಳನ್ನ ಮಾಡಬೇಕು.
ಮಹಿಳೆಯರ ಶೋಷಣೆ ಆಗುತ್ತಿರುವ ಎಲ್ಲಾ ರಂಗಗಳನ್ನ ಶುದ್ಧೀಕರಿಸಬೇಕು, ಅವರನ್ನು ರಾಜಕೀಯವಾಗಿ ಪ್ರಭುದ್ಧರನ್ನಾಗಿ ಮಾಡಬೇಕು, ಬಡತನ, ಶೋಷಣೆ ದೌರ್ಜನ್ಯಗಳಿಂದ ಮುಕ್ತಗೊಳಿಸಬೇಕು, ಉತ್ತಮ ಶಿಕ್ಷಣ ನೀಡಿ ಅವರಿಗೆ ಸ್ವಂತ ಕಾಲ ಮೇಲೆ ನಿಲ್ಲುವಂಥ, ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದರು.
ಅವಿದ್ಯಾವಂತರು ಮತ್ತು ವಿದ್ಯಾವಂತರಲ್ಲೂ ಸಹ ಇನ್ನೂ ಹೆಣ್ಣು ಭ್ರೂಣ ಹತ್ಯೆ ನಡೆದೇ ಇದೆ, ಅದರಲ್ಲಿ ಕರ್ನಾಟಕ ಮತ್ತು ಚಿತ್ರದುರ್ಗ ಸ್ವಲ್ಪಮಟ್ಟಿಗೆ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ಬರುತ್ತಿದೆ, ಇದು ಇನ್ನೂ ಹೆಚ್ಚುತ್ತಾ ಹೋಗಿ, ಹೆಣ್ಣು ಗಂಡಿನ ಸಮಾನತೆಯ ಗುರಿಮುಟ್ಟುವವರೆಗೂ ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ಕಲಿತು ರಾಜಕೀಯದಲ್ಲೂ ಸಹ ತಮಗೆ ನೀಡಿದ ಅಧಿಕಾರವನ್ನು ಸ್ವತಃ ಯೋಚಿಸಿ ಕಾರ್ಯರೂಪಕ್ಕೆ ತರಬಹುದು ಎಂದರು.
ಪ್ರಾಂಶುಪಾಲರಾದ ಶ್ರೀ ಸಿದ್ದರಾಮ ಚನಗೊಂಡರವರು ಅಧ್ಯಕ್ಷೀಯ ಭಾಷಣ ಮಾಡುತ್ತಾ ಹೆಣ್ಣು ಮಕ್ಕಳ ಅಭಿವೃದ್ಧಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರ ಪಾತ್ರವಿದೆ, ಅಣ್ಣತಮ್ಮಂದಿರ, ತಂದೆ ತಾಯಿಯರ, ಸಹಕಾರದಿಂದ ಅವರನ್ನ ಶೈಕ್ಷಣಿಕವಾಗಿ ಆರ್ಥಿಕವಾಗಿ, ಮಾನಸಿಕವಾಗಿ ಸಬಲೀಕರಿಸಬಹುದು, ಹಾಗಾಗಿ ಕುಟುಂಬದ ಸದಸ್ಯರು ಮತ್ತು ಸಮಾಜದ ಪ್ರಮುಖರು ಮಹಿಳಾ ಸಬಲೀಕರಣದ ಬಗ್ಗೆ ಶ್ರಮವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನ ಡಾ. ರಾಜೇಶ್ವರಿ. ಪಿ. ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಫೈರೋಜಾರವರು ಸ್ವಾಗತಿಸಿದರು,
ಮಹಿಳಾ ಸಬಲೀಕರಣ ಕೋಶದ ಸಂಯೋಜಕರಾದ ಶ್ರೀಮತಿ ರಶ್ಮಿ ಟಿ. ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶ್ರೀಮತಿ ಸೀಮಾ ಕೌಸರ್ ರವರು ಅತಿಥಿಗಳ ಪರಿಚಯ ಮಾಡಿಕೊಟ್ಟರು,
ಬಹುಮಾನ ವಿತರಣೆ ಶ್ರೀಮತಿ ಸುಮಾ. ಕೆ. ನೆರವೇರಿಸಿ, ಶ್ರೀಮತಿ ವಿದ್ಯಾ ವೈ. ಎಸ್. ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಶ್ರೀ ಮಂಜಣ್ಣ, ಕೆ. ವಿನೋದ್ ಕುಮಾರ್, ಕೃಷ್ಣಮೂರ್ತಿ, ಲಾಲ್ ಸಿಂಗ್ ನಾಯಕ್, ಸತೀಶ್ ಗೌಡ, ಶ್ರೀಮತಿ ವಿದ್ಯಾ ಕೆ ವಿ, ವಿದ್ಯಾ, ಎಸ್. ರಾಘವೇಂದ್ರ ಮಂಜುನಾಥ್, ಪ್ರಮೋದ್ ನಾಗರಾಜ್ ಎನ್. ವಿ, ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಎಲೆಕ್ಟ್ರಾನಿಕ್ಸ್ ವಿಭಾಗದ ಆರನೇ ರ್‍ಯಾಂಕ್ ಗಳಿಸಿದ ಎಚ್. ಎಸ್. ರಚನ, ಸ್ನಾತಕೋತ್ತರ ವಿಭಾಗದ ಸಸ್ಯಶಾಸ್ತ್ರ ವಿಭಾಗದ ಏಳನೇ ರ್‍ಯಾಂಕ್ ಗಳಿಸಿದ ಆಯಿಷ ಮುಸ್ಕಾನ್ ಅಹಮದ್ ಪಟೇಲ್, ರಸಾಯನ ಶಾಸ್ತ್ರದಲ್ಲಿ ಐದನೇ ರ್‍ಯಾಂಕ್ ಗಳಿಸಿದ ನಾಗವೇಣಿ ಜಿ. ಏಳನೇ ರ್‍ಯಾಂಕ್ ಗಳಿಸಿದ ಸುಶ್ಮಿತಾ. ಡಿ. ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು,
ಮಹಿಳಾ ದಿನಾಚರಣೆ ಪ್ರಯೋಗ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.