Government School : ಸರ್ಕಾರಿ ಶಾಲೆಗಳಲ್ಲೂ ಸಹ ಪ್ರತಿಭಾವಂತ, ಹೃದಯವಂತ ಮಕ್ಕಳಿದ್ದಾರೆ. ಡಾ ಎಚ್ ಕೆ ಎಸ್ ಸ್ವಾಮಿ

ಚಿತ್ರದುರ್ಗ : Government School ಸರ್ಕಾರಿ ಶಾಲೆಗಳಲ್ಲೂ ಸಹ ಪ್ರತಿಭಾವಂತ, ಹೃದಯವಂತ, ಕೌಶಲ್ಯವುಳ್ಳ, ನೀತಿವಂತ ವಿದ್ಯಾರ್ಥಿಗಳಿದ್ದು, ಅವರನ್ನ ಗುರುತಿಸಿ, ಪ್ರೋತ್ಸಾಹಿಸಿ, ಉತ್ತಮ ಸ್ಥಿತಿಗೆ ತಂದು ನಿಲ್ಲಿಸುವ ಜವಾಬ್ದಾರಿ ಶಿಕ್ಷಕರ ಮತ್ತು ಪೋಷಕರ ಮೇಲೆ ಇದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಹ ಗಂಭೀರವಾಗಿ ಪರಿಗಣಿಸಿ, ಉತ್ಕೃಷ್ಟ ಮಟ್ಟದ, ಗುಣಾತ್ಮಕ ಶಿಕ್ಷಣ ನೀಡಿದಾಗ, ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ಮುಂದೆ ನುಗ್ಗಿ, ಮುಖಂಡತ್ವವನ್ನು ವಹಿಸಿ, ದೇಶ ಕಟ್ಟುವ ಮನಸ್ಸುಳ್ಳ ವಿದ್ಯಾರ್ಥಿಗಳಾಗುತ್ತಾರೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ಕರೆ ನೀಡಿದ್ದಾರೆ.
ಅವರು ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿರುವ ವಿ.ಪಿ. ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮತ್ತು ಗಾಂಧೀಜಿ ವಿಚಾರಗಳ ಬಗ್ಗೆ ಮಕ್ಕಳಿಗೆ ಆಟದ ಸಾಮಾನುಗಳ ಮುಖಾಂತರ, ಪ್ರಾತ್ಯಕ್ಷಿಕೆ ಮುಖಾಂತರ ಗಾಂಧೀಜಿಯ ಚಿಂತನೆಗಳನ್ನ ಬೋಧಿಸುತ್ತಾ ಮಾತನಾಡುತ್ತಿದ್ದರು.
ಮಕ್ಕಳು ಪ್ರತಿಭಾವಂತರಾಗಿದ್ದು, ಬಡತನದಲ್ಲಿ ಹುಟ್ಟಿದ್ದರು ಸಹ, ಶೈಕ್ಷಣಿಕ ಸಾಧನೆಯಲ್ಲಿ ಮುನ್ನುಗುವ ಮನಸ್ಸುಳ್ಳ ವಿದ್ಯಾರ್ಥಿಗಳಿದ್ದಾರೆ, ಅವರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಾ, ಪರಿಸರದಲಾಗುತ್ತಿರುವ ಬದಲಾವಣೆಗಳನ್ನ, ದೇಶದಲ್ಲಿರುವ ಸಮಸ್ಯೆಗಳನ್ನ ಬಗೆಹರಿಸುವ ನಿಟ್ಟಿನಲ್ಲಿ, ಅವರಿಗೆ ಆಟದ ಸಾಮಾನುಗಳ ಮುಖಾಂತರ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿ ಕೊಟ್ಟಾಗ, ಮಕ್ಕಳು ಶೀಘ್ರವಾಗಿ ವಿಚಾರಗಳನ್ನು ತಿಳಿದುಕೊಂಡು, ಅನುಷ್ಠಾನಗೊಳಿಸಲು ಉತ್ಸಾಹಕರಾಗುತ್ತಾರೆ ಎಂದರು.
ಗಾಂಧೀಜಿಯವರ ಚಿಂತನೆಗಳನ್ನ ಬಿಡಿಸಿ, ಸುಲಭಗೊಳಿಸಿ, ಆಟದ ಸಾಮಾನುಗಳು ಮುಖಾಂತರ, ಮಾದರಿಗಳ ಮುಖಾಂತರ ಮಕ್ಕಳಿಗೆ ಬೋಧಿಸಿದಾಗ, ಪ್ರತಿಯೊಂದು ಮಗುವು ಸಹ ತದೇಕಚಿತ್ತದಿಂದ, ಚರಕ, ಖಾದಿ, ದಾರಾ ಮಾಡುವುದು, ಗಾಂಧೀಜಿಯವರ ವಿಚಾರಗಳು, ಸರಳತೆ, ಅಹಿಂಸೆ, ಸತ್ಯಾಗ್ರಹ, ಹೋರಾಟ, ಸಂಘಟನೆ ಎಲ್ಲಾ ವಿಚಾರಗಳನ್ನ ಅರ್ಥೈಸಿಕೊಂಡು, ತನ್ನ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾ, ಸ್ವಂತ ಕಾಲ ಮೇಲೆ ನಿಲ್ಲುವುದಕ್ಕೆ ಪ್ರಯತ್ನಿಸುತ್ತದೆ ಎಂದರು.

ಮಕ್ಕಳನ್ನ ಗುಲಾಮಗಿರಿಯಿಂದ ಹೊರ ತಂದು ಸ್ವಂತ ಭಾಷೆಯಲ್ಲಿ, ಸ್ವಂತ ಚಿಂತನೆಗಳನ್ನು, ಸ್ವಂತ ವಿಚಾರಗಳನ್ನ ಸ್ವಂತ ನೆಲದ ಸಾಹಿತ್ಯ, ಕವಿತೆ, ಜ್ಞಾನವನ್ನು ತಿಳಿಸಿಕೊಟ್ಟರೆ, ಭಾರತೀಯ ಪುರಾತತ್ವ ವಿಚಾರಗಳು, ಇಂದಿನ ನವ ನಾಗರಿಕತೆಯ ವಿರುದ್ಧ ಎದ್ದು ನಿಲ್ಲಲು, ಪ್ರತಿಭಟಿಸಲು, ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಲು, ಉಪಯೋಗಕ್ಕೆ ಬರುತ್ತದೆ. ಪಾಶ್ಚಿಮಾತ್ಯ ಶಿಕ್ಷಣ ಶೈಲಿ, ಪಾಶ್ಚಿಮಾತ್ಯ ಉಡುಪು, ಪಾಶ್ಚಿಮಾತ್ಯ ಊಟ, ತಿಂಡಿ ಪಾಶ್ಚಿಮಾತ್ಯ ಭಾಷೆಗಳು, ಪಾಶ್ಚಿಮಾತ್ಯ ಜೀವನಶೈಲಿಯನ್ನ ಮಕ್ಕಳಿಗೆ ತೋರಿಸುತ್ತ, ನಾವು ಹಿರಿಯರು ದಾರಿ ತಪ್ಪಿಸುತ್ತಿದ್ದೇವೆ, ನಮ್ಮ ಹಳೆಯ ಭಾರತದ, ಸತ್ಯ, ಅಹಿಂಸೆ, ಅಸಂಗ್ರಹ, ದಯೆ, ಕರುಣೆ, ಸಮಭಾಗಿತ್ವ, ಸರ್ವೋದಯ, ಸತ್ಯಾಗ್ರಹ, ಇವೆಲ್ಲವನ್ನೂ ಮಕ್ಕಳಿಗೆ ಬೋಧಿಸಿ, ಮುಂದೆ ಬರುವ ಗಂಡಾಂತರಗಳ ವಿರುದ್ಧ, ಸಣ್ಣದಾಗಿ ಅವರ ಹೋರಾಟಗಳನ್ನ ಮುಂದುವರಿಸುತ್ತಾ, ಭೂಮಿಯನ್ನ ಸ್ವರ್ಗಮಯ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬಹುದು ಎಂದರು.
ಕಸದಿಂದ ರಸ ಮಾಡಿ, ಬಿಸಾಡುವ ವಸ್ತುಗಳಿಂದ ಉತ್ಪನ್ನಗಳನ್ನು ತಯಾರು ಮಾಡಿ, ಗ್ರಾಮೀಣ ವಸ್ತುಗಳನ್ನ, ಗ್ರಾಮೀಣ ಉದ್ಯೋಗಗಳನ್ನ ಮರುಸ್ಥಾಪನೆ ಮಾಡಿ, ಮಕ್ಕಳಿಗೆ ಶಾಲೆಯಲ್ಲಿ ಚರಕವನ್ನ ಇಟ್ಟು, ಬೋಧಿಸಿದಾಗ ಗಾಂಧೀಜಿಯವರ ಚಿಂತನೆಗಳನ್ನ ಅನುಷ್ಠಾನಗೊಳಿಸಲು ಸುಲಭವಾಗಿರುತ್ತದೆ. ಗುಡಿಗೈಗಾರಿಕೆಯ ಕೌಶಲ್ಯಗಳನ್ನು ತೋರಿಸಿಕೊಟ್ಟರೆ, ಮೂಲಭೂತ ಶಿಕ್ಷಣದ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಅಶ್ರಫ್ ರವರು ಮಾತನಾಡುತ್ತಾ ಮಕ್ಕಳಿಗೆ ಯೋಗಭ್ಯಾಸದ ಜೊತೆ ಜೊತೆಗೆ, ಹಲವು ಕಲಿಕಾ ಮಾರ್ಗಗಳನ್ನ , ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ, ಕಸದಿಂದ ರಸ ಮಾಡುವ ವಿಚಾರವನ್ನು ತಿಳಿಸಿಕೊಟ್ಟಾಗ, ಶಾಲೆಯ ಸುತ್ತಮುತ್ತ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಸುತ್ತಮುತ್ತಲಿರುವ ನಿವಾಸಿಗಳಿಗೆ ಜಾಗೃತಿಗೊಳಿಸಲು ಅನುಕೂಲಕರವಾಗುತ್ತದೆ ಎಂದರು.
ಕನ್ನಡ ಶಿಕ್ಷಕಿಯಾದ ಲಕ್ಷ್ಮಿ ದೇವಿಯವರು ಮಾತನಾಡುತ್ತ ಮಕ್ಕಳಿಗೆ ಮೌಲ್ಯಗಳ ಅಗತ್ಯವಿದೆ, ಪಾಠ ಪ್ರವಚನದ ಜೊತೆ ಮೌಲ್ಯಗಳನ್ನು ಸಹ ಬೋಧಿಸಿ, ಮಕ್ಕಳನ್ನು ಶಿಸ್ತುಬದ್ಧ ಗೊಳಿಸುವುದು ಅನುಕೂಲಕರವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂವಾದದ ಮುಖಾಂತರ ಪ್ರಶ್ನೆಗಳನ್ನು ಕೇಳಿ, ಉತ್ತರವನ್ನು ಪಡೆದು, ಗಾಂಧೀಜಿಯವರ ಚಿಂತನೆಗಳನ್ನ ಅರಿತುಕೊಂಡು, ಅನುಷ್ಠಾನಗೊಳಿಸಲು ಪ್ರಯತ್ನಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯದ ಶ್ರೀ ಸುರೇಶ್.ಎನ್. ಸಹ ಶಿಕ್ಷಕರಾದ ಮಂಜುನಾಥ್, ಸರಸ್ವತಿ. ಡಿ. ಅಮೀನಾ ಬಿ. ಅಫ್ರಾನ ಬಾನು ವಿನುತಾ, ರಶ್ಮಿ ಎಲ್. ಬಿ. ಸುಕನ್ಯ ಹಾಗೂ ಇನ್ನಿತರ ಭೋದಕ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.