ಕ್ವಿಟ್ ಇಂಡಿಯಾ ಚಳುವಳಿ ದಿನದ ಅಂಗವಾಗಿ “ಭಾರತ ಉಳಿಸಿ ದಿನವನ್ನಾಗಿ” ಆಚರಿಸಲು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ದಾವಣಗೆರೆ: ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕ ದಿನದ ಅಂಗವಾಗಿ “ಭಾರತ ಉಳಿಸಿ ದಿನವನ್ನಾಗಿ” ಆಚರಿಸಲು ಕರೆ ನೀಡಿದ ಮೇರೆಗೆ ನಗರದ ಜಯದೇವ ವೃತ್ತದಲ್ಲಿಂದು ಎಐಯುಟಿಯುಸಿ,ಆರ್.ಕೆ.ಎಸ್,ಎಐಡಿವೈಒ & ಎಐಎಂಎಸ್‍ಎಸ್ ಪ್ರತಿಭಟನೆ ನಡೆಸಿದವು.

ಕಾರ್ಮಿಕ-ವಿರೋಧಿ ಕಾರ್ಮಿಕ ಸಂಹಿತೆಗಳು, ರೈತ-ವಿರೋಧಿ ಕೃಷಿ ಕಾಯ್ದೆಗಳು ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿ. ಉದ್ಯೋಗ ನಾಶ ಮತ್ತು ಜೀವನಾಂಶದ ಬಿಕ್ಕಟ್ಟನ್ನು ಬಗೆಹರಿಸಿ, ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸಿ, ಲಾಕ್ಡೌನ್ ಅಥವಾ ಅಂತಹ ಯಾವುದೇ ಸಂದರ್ಭದಲ್ಲಿ ಕೈಗಾರಿಕೆ/ಸೇವಾ ವಲಯ/ಕಾರ್ಖಾನೆಗಳ ನೌಕರರನ್ನು ಕೆಲಸದಿಂದ ವಜಾಗೊಳಿಸುವಿಕೆ ಮತ್ತು ವೇತನ ಕಡಿತವನ್ನು ನಿಷೇದಿಸಿ .

ಸರ್ಕಾರಿ ಇಲಾಖೆಗಳಲ್ಲಿ ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ, ಪ್ರತಿವರ್ಷ 3% ಖಾಲಿ ಹುದ್ದೆಗಳ ಬಿಟ್ಟುಕೊಡುವಿಕೆಯನ್ನು ನಿಲ್ಲಿಸಬೇಕು . ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸದಂತೆ ಮಾಡಲಾಗಿರುವ ಆದೇಶವನ್ನು ಹಿಂಪಡೆಯಬೇಕು .

ನಗರ ಮಟ್ಟದ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ. ಕೆಲಸದ ಹಕ್ಕನ್ನು ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸಿ. ಆದಾಯ ತೆರಿಗೆ ಪಾವತಿಸದ ಎಲ್ಲಾ ಕುಟುಂಬಗಳಿಗೆ ಮಾಸಿಕ 7500 ರೂಪಾಯಿ ನಗದು ವರ್ಗಾವಣೆ ಖಾತ್ರಿಪಡಿಸಿ. ಆರೋಗ್ಯ ಬಜೆಟ್ಟನ್ನು ಹೆಚ್ಚಿಸಿ, ಎಲ್ಲಾ ಹಂತಗಳಲ್ಲೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ.

ಕೋವಿಡೇತರ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಬೇಕು . ಮಹಾಮಾರಿ ನಿರ್ವಹಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೂ ಸೇರಿದಂತೆ ಎಲ್ಲಾ ಮುಂಚೂಣಿ ಕೋವಿಡ್ ಯೋಧರಿಗೆ ರಕ್ಷಣಾ ಕವಚ ಮತ್ತು ಅಗತ್ಯ ಸಲಕರಣೆ ಹಾಗೂ ಅವರಿಗೆ ಹಾಗೂ ವಿಮಾ ರಕ್ಷಣೆ ಒದಗಿಸಬೇಕು.

ಸಾರ್ವಜನಿಕ ಉದ್ದಿಮೆಗಳು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಸಗೀಕರಣ ನಿಲ್ಲಿಸಿ ಜನವಿರೋಧಿ “ಅಗತ್ಯ ರಕ್ಷಣಾ ಸೇವೆಗಳ ಸುಗ್ರೀವಾಜ್ಞೆ, 2021 ” ರದ್ದುಗೊಳಿಸಿ. ಅಗತ್ಯ ವಸ್ತುಗಳು, ಪೆಟ್ರೋಲ್-ಡೀಸೆಲ್ ಮತ್ತು ಎಲ್ಪಿಜಿ ಬೆಲಯೇರಿಕೆಯನ್ನು ತಹಬದಿಗೆ ತನ್ನಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕುವಾಡ , ಆರ್ ಕೆಎಸ್ ರಾಜ್ಯಾಧ್ಯಕ್ಷ ಸುನೀತ್ ಕುಮಾರ್, ಎಐಎಂಎಸ್ ಎಸ್ ಜಿಲ್ಲಾ ಕಾರ್ಯದರ್ಶಿ ಭಾರತಿ, ಮಧು ತೊಗಲೇರಿ, ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್ ಢಾಗೆ, ನಾಗಜ್ಯೋತಿ, ರವಿ ಕುಮಾರ್, ತುಕಾರಾಮ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!