Guarantee: ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ, ಅಡೆತಡೆ ನಿವಾರಣೆಗೆ ಅಧಿಕಾರಿಗಳಿಗೆ ಸೂಚನೆ, ಜಗಳೂರು ವ್ಯಾಪ್ತಿ ರಸ್ತೆಯ ಜಂಗಲ್ ತೆರವಿಗೆ ಸಿಇಓ ಸ್ಪಂದನೆ

ದಾವಣಗೆರೆ(Guarantee): ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಟಾನವಾಗುತ್ತಿದ್ದು ಫಲಾನುಭವಿಗಳು ಪಡೆಯಲು ಇರುವ ಅಡೆತಡೆ, ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ ಬಸವರಾಜ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಾದರೆ, ಹಲವು ತಾಂತ್ರಿಕ ದೋಷ, ಅಡೆತಡೆ ಸಹಜ. ಅವುಗಳನ್ನು ತ್ವರಿತವಾಗಿ ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮುಖ್ಯವಾಗಿ ಗೃಹಲಕ್ಷ್ಮೀ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆ ಬಗ್ಗೆ ದೂರು ಕೇಳಿಬರುವುದರ ಜೊತೆಗೆ ಕೆಲವು ತಾಂತ್ರಿಕ ಲೋಪದೋಷಗಳು ಕಂಡು ಬರುತ್ತಿವೆ. ಈ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಜಿಲ್ಲೆಯಲ್ಲಿ ಅನಧಿಕೃತ ಪಡಿತರ ಪ್ರದೇಶದ ಕಾರ್ಡ್, ಆಧ್ಯತಾ , ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅರ್ಹತೆ ಇಲ್ಲದ ಪಡಿತರ ಚೀಟಿ, ಕುಟುಂಬಗಳನ್ನು ಗುರುತಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಅಂತಹವರ ಪಡಿತರ ಚೀಟಿಗಳನ್ನು ರದ್ದುಪಡಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ಒದಗಿಸುವಂತೆ ಸೂಚನೆ ನೀಡದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ವೇಳೆ ತೂಕದಲ್ಲಿ ವ್ಯತ್ಯಾಸ, ಹಣ ಪಡೆದು ಪಡಿತರ ವಿತರಣೆ ಕುರಿತು ದೂರುಗಳು ಕೇಳಿ ಬರುತ್ತಿವೆ. ಅಂತಹ ಪ್ರಕರಣಗಳ ಬಗ್ಗೆ ನಿಖರ ಮಾಹಿತಿ ನೀಡಿ. ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಗಳೂರು ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಮೀಣ ಭಾಗದ ರಸ್ತೆಗಳು ತಗ್ಗು ಗುಂಡಿಗಳಿಂದ ಆವೃತವಾಗಿ ರಸ್ತೆಯ ಇಕ್ಕೆಲಗಳಲ್ಲಿ ಜಂಗಲ್ ಬೆಳದು ನಿಂತು ಸಾರಿಗೆ ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಸದಸ್ಯರಾದ ರಾಘವ ಗೌಡ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಸಿಇಓ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ತ್ವರಿತವಾಗಿ ಸಮಸ್ಯೆ ಪರಿಹರಿಸಲು ಸೂಚಿಸಿದರು.
ಪ್ರಮುಖವಾಗಿ ಅರಳಿಪುರ, ಕೂಲಂಬಿ, ಕುಂದೂರು ಮಾರ್ಗವಾಗಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಶಿವಮೊಗ್ಗ, ನ್ಯಾಮತಿ, ಹೊನ್ನಾಳಿ ಮಾರ್ಗದಲ್ಲಿ ರೈಲ್ವೆ ಸಂಚಾರಕ್ಕೆ ಅನುಗುಣವಾಗಿ ರಾತ್ರಿವೇಳೆ ಬಸ್ ವ್ಯವಸ್ಥೆ ಕಲ್ಪಿಸಲು ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯಿಸಿ ಆದ್ಯತೆಯ ಮೇರೆಗೆ ಪರಿಶೀಲಿಸಿ ತ್ವರಿತವಾಗಿ ಕ್ರಮವಹಿಸಲಾಗುವುದು ಎಂದರು.
ಶಕ್ತಿ ಯೋಜನೆ: ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಡಿ 2023ರ ಜೂನ್ ನಿಂದ 2025ರ ಆಗಸ್ಟ್ವರೆಗೆ 10.34 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ವೆಚ್ಚವಾಗಿ 301.22 ಕೋಟಿ ಪ್ರಯಾಣ ವೆಚ್ಚ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ; ಜುಲೈ 2023 ರಿಂದ ಡಿಸೆಂಬರ್ 2024ರ ವರೆಗೆ ಜಿಲ್ಲೆಯ 2.17 ಕೋಟಿ ಫಲಾನುಭವಿಗಳಿಗೆ ರೂ.346.33 ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪಾವತಿಸಲಾಗಿದೆ. 2025ರ ಫೆಬ್ರುವರಿಯಿಂದ ಆಗಸ್ಟ್ವರೆಗೆ ಹಣದ ಬದಲಾಗಿ ಜಿಲ್ಲೆಯ 391370 ಪಡಿತರ ಚೀಟಗಳಿಗೆ 4,22,092 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್ ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ; ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ವಿದ್ಯುತ್ ಸಂಪರ್ಕ ಪಡೆದಿರುವ 562478 ಗ್ರಾಹಕರಲ್ಲಿ 504574 ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ನೊಂದಣಿ ಮಾಡಿಸಿದ್ದು ಈ ಗ್ರಾಹಕರ ವಿದ್ಯುತ್ ವೆಚ್ಚವಾಗಿ ರೂ. 23.88 ಕೋಟಿ ಹೊಂದಾಣಿಕೆ ಮಾಡಲಾಗಿದೆ. ಈ ಗ್ರಾಹಕರು ಒಟ್ಟು ರೂ.32.04 ಕೋಟಿ ವೆಚ್ಚದ ವಿದ್ಯುತ್ ಬಳಕೆ ಮಾಡಿದ್ದು ಇದರಲ್ಲಿ 23.88 ಕೋಟಿ ಸರ್ಕಾರ ಭರಿಸಿದೆ.
ಗೃಹಲಕ್ಷ್ಮಿ ಯೋಜನೆಯಡಿ; 2023ರ ಆಗಸ್ಟ್ ನಿಂದ 2025ರ ಜೂನ್ವರೆಗೆ ಜಿಲ್ಲೆಯಲ್ಲಿ ನೊಂದಣಿಯಾದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ರೂ.1472.60 ಕೋಟಿ ಪಾವತಿ ಮಾಡಲಾಗಿದೆ. ಯೋಜನೆ ಆರಂಭವಾದ ಆಗಸ್ಟ್ನಲ್ಲಿ 316903 ಪಲಾನುಭವಿಗಳಿದ್ದು 2025 ರ ಜೂನ್ ತಿಂಗಳಲ್ಲಿ 362498 ಯಜಮಾನಿಯರು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಮಾಸಿಕ ರೂ.2000 ಪಡೆದಿರುವರು.ಹಾಗೆಯೇ 2023ನೇ ಸಾಲಿನಲ್ಲಿ ನೊಂದಣಿಯಾಗಿ ಮರಣ ಹೊಂದಿದ 205 ಫಲಾನುಭವಿಗಳಿಗೆ ಜಮೆಯಾದ ರೂ.25 ಲಕ್ಷ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡಲಾಗಿದೆ.
ಯುವನಿಧಿ ಯೋಜನೆಯಡಿ; ಜಿಲ್ಲೆಯಾದ್ಯಂತ 8536 ಪದವಿ ಮತ್ತು 168 ಡಿಪೆÇ್ಲೀಮಾ ಪಾಸಾದ ನಿರುದ್ಯೋಗಿ ಫಲಾನುಭವಿಗಳು ಸೇರಿ ಒಟ್ಟು 8704 ವಿದ್ಯಾವಂತ ಯುವ ಜನರಿಗೆ ನಿರುದ್ಯೋಗ ಭತ್ಯೆಯಾಗಿ 2025ರ ಮೇ ಅಂತ್ಯಕ್ಕೆ 19.58 ಕೋಟಿ ಮೊತ್ತ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಹೊಸದಾಗಿ 1711 ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ನೊಂದಾಯಿಸಿದ್ದಾರೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ಕೆ.ಎನ್.ಮಂಜುನಾಥ, ಅನಿಶ್ ಪಾಷಾ, ನಂಜಾನಾಯ್ಕ, ರಾಜೇಶ್ವರಿ ಸೇರಿದಂತೆ ಸಮಿತಿ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.