Bhadra: ಭದ್ರಾ ನಾಲೆಗಳ ದುರಸ್ತಿಗೆ ಅನುದಾನ; ರೈತರ ಹಿತಕ್ಕಾಗಿ ಡಿಸಿಎಂಗೆ ಮನವಿ ಸಲ್ಲಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

IMG-20250912-WA0010

ದಾವಣಗೆರೆ: (Bhadra) ಭದ್ರಾ ಅಚ್ಚುಕಟ್ಟಿನ ನಾಲೆಗಳ ನಿರ್ವಹಣೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವೆಡೆ ನಾಲೆಗಳು ಕುಸಿದು ನೀರು ವ್ಯರ್ಥವಾಗಿ ಹೊರಹೋಗುತ್ತಿರುವುದು, ಮತ್ತಿತರ ಭಾಗಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕೊನೆಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಸಂಸದರು ತಮ್ಮ ಮನವಿಯನ್ನು ಉಪಮುಖ್ಯಮಂತ್ರಿಗಳಿಗೆ ಅರ್ಪಿಸಿ ಅನುದಾನ ಬಿಡುಗಡೆಗೆ ಒತ್ತಾಯಿಸಿದರು.

ಈ ವಿಷಯವಾಗಿ ಕಳೆದ ವರ್ಷ ಸಂಬಂಧಪಟ್ಟ ಇಂಜಿನಿಯರ್‌ರನ್ನು ಕರೆಸಿ ಚರ್ಚೆ ನಡೆಸಿದ ಸಂದರ್ಭದಲ್ಲಿ, ಸುಮಾರು ₹100 ಕೋಟಿ ಅನುದಾನ ಅಗತ್ಯವಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಈ ವಿಷಯ ಕುರಿತು ಮುಖ್ಯಮಂತ್ರಿಗಳಿಗೆ ಕೂಡ ಪತ್ರ ಬರೆದು ಮನವಿ ಸಲ್ಲಿಸಲಾಗಿತ್ತು.

ಭದ್ರಾ ಅಚ್ಚುಕಟ್ಟಿನ ಕೊನೆಭಾಗವು ನಾಲ್ಕು ಉಪವಿಭಾಗಗಳನ್ನು ಒಳಗೊಂಡಿದ್ದು, ಒಟ್ಟಾರೆ 32,000 ಹೆಕ್ಟೇರ್ ಜಮೀನಿಗೆ ನೀರು ಸಿಗುತ್ತದೆ. ಆದರೆ, ಸುಮಾರು 5,700 ಹೆಕ್ಟೇರ್ ಜಮೀನಿಗೆ ಬೇಸಿಗೆಯ ಸಮಯದಲ್ಲಿ ನೀರು ತಲುಪದ ಕಾರಣ ರೈತರು ವರ್ಷಕ್ಕೆ ಕೇವಲ ಒಂದು ಬೆಳೆಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಇದರಿಂದ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಮೂರು ಜಿಲ್ಲೆಗಳ ರೈತರ ಬದುಕು, ಭವಿಷ್ಯ ಮತ್ತು ಕೃಷಿ ಆರ್ಥಿಕತೆಯ ಹಿತದೃಷ್ಟಿಯಿಂದ ತಕ್ಷಣವೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಸದರು ಒತ್ತಾಯಿಸಿದ್ದಾರೆ.

ಇದರ ಜೊತೆಗೆ, ಭದ್ರಾ ಬಲದಂಡೆ ನಾಲೆಯಿಂದ ಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಿಂದ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಬಲದಂಡೆ ನಾಲೆಯಿಂದ ನೀರು ಲಿಫ್ಟ್ ಮಾಡುವ ಬದಲು ತುಂಗಾ ನದಿಯಿಂದ ನೀರು ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನಿಯೋಗವು ಸರ್ಕಾರದ ಗಮನಕ್ಕೆ ತಂದಿದೆ.

“ಭದ್ರಾ ನಾಲೆಗಳ ಅಭಿವೃದ್ಧಿಗೆ ತಕ್ಷಣದ ಕ್ರಮ ಕೈಗೊಂಡು, ಅನುದಾನ ಬಿಡುಗಡೆ ಮಾಡುವ ಮೂಲಕ ರೈತರ ಬದುಕು ಉಳಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್,ಹಿರಿಯ ನಾಯಕರಾದ ಟಿ.ಬಿ.ಜಯಚಂದ್ರ,
ಶಾಸಕರುಗಳಾದ ಡಿ.ಜಿ ಶಾಂತನಗೌಡ,ಕೆ.ಎಸ್.ಬಸವಂತಪ್ಪ, ಶಿವಗಂಗಾ ಬಸವರಾಜ್,ಸಂಗಮೇಶ್ ಹಾಗೂ ಕಾಂಗ್ರೆಸ್ ಮುಖಂಡರುಗಳು,ಕಾರ್ಯಕರ್ತರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!