Fake News: ಸುಳ್ಳು ಸುದ್ದಿ ಪ್ರಚಾರ ಆರೋಪ: ಪತ್ರಕರ್ತನೆಂದು ಹೇಳುತ್ತಿದ್ದ ವ್ಯಕ್ತಿ ಸೇರಿ ಐವರ ವಿರುದ್ಧ FIR

ಮಂಗಳೂರು: (Fake News) ಸುಳ್ಳು ಸುದ್ದಿ ಮೂಲಕ ಸಮಾಜದ ಶಾಂತಿ ಕದಡಲು ಯತ್ನಿಸಿದ್ದ ಆರೋಪದಲ್ಲಿ ಓರ್ವ ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿ ಸೇರಿ ಐವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದೆ.
ನೈಜತೆಯನ್ನು ಪರಿಶೀಲಿಸದೇ ಪೊಲೀಸರ ಮೇಲೆ ಸಾರ್ವಜನಿಕರಿಗೆ ದ್ವೇಷ ಭಾವನೆ ಹುಟ್ಟಿಸುವ ವಿಡಿಯೋವನ್ನು ಪ್ರಸಾರ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಂಟ್ವಾಳ ತಾಲೂಕಿನ ಕರಾವಳಿ ಸುದ್ದಿಯ ಪತ್ರಕರ್ತ ಎಂದು ಕರೆಸಿಕೊಳ್ಳುತ್ತಿದ್ದ ರೋಶನ್ ಬೊನಿಫಾಸ್ ಮಾರ್ಟಿಸ್ ಎಂಬವರ ಜೊತೆ ಇತರ ನಾಲ್ವರ ವಿರುದ್ಧ FIR ದಾಖಲಾಗಿದೆ.
ವಾರೆಂಟ್ ಇಲ್ಲದೇ ಅರೆಸ್ಟ್ ಮಾಡಿದ್ದಾರೆಂದು ವಿಡಿಯೋ ಶೇರ್
ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ, ಮನೆಯಲ್ಲಿದ್ದ ನವಾಝ್ ತಾಯಿ ಜುಬೇದ ಪೊಲೀಸರನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎನ್ನಲಾಗಿದೆ. ಆ ವೇಳೆ ಪೊಲೀಸರು ಅರೆಸ್ಟ್ ವಾರೆಂಟ್ ಇದೆ ಎಂದು ತಿಳಿಸಿದರೂ ಜುಬೇದ ಅವರು ಪೊಲೀಸರ ಬಗ್ಗೆ ವೀಡಿಯೊ ಚಿತ್ರೀಕರಿಸಿದ್ದು ‘ಯಾವುದೇ ವಾರೆಂಟ್ ಇಲ್ಲದೆ ಉಳ್ಳಾಲದ ಭ್ರಷ್ಟ ಪೊಲೀಸರು ನವಾಝ್‌ನನ್ನು ಎಳಕೊಂಡು ಹೋಗುತ್ತಿದ್ದಾರೆಂದು ಸುಳ್ಳು ಮಾಹಿತಿ ನೀಡಿ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು ಎಂಬುದು ಪೊಲೀಸರ ಆರೋಪ.
ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹರಿಬಿಟ್ಟು ಪೊಲೀಸರ ಬಗ್ಗೆ ಅಪನಂಬಿಕೆ ಹುಟ್ಟಿಸುವ ರೀತಿ ಮಾಡಿರುವ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳೂರು ಆಯುಕ್ತ ಸುಧೀರ್ ರೆಡ್ಡಿ ಅವರು ಉಳ್ಳಾಲ ಠಾಣೆಯ ಪೊಲೀಸರಿಗೆ ಆದೇಶಿಸಿದ್ದರು. ಕಮಿಷನರ್ ಆದೇಶದಂತೆ ಪೊಲೀಸರು ಆರೋಪಿ ನವಾಝ್ ತಾಯಿ ಜುಬೇದಾ ಸೇರಿ ಐವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಇದೇ ವೇಳೆ, ಜುಬೇದಾ ಎಂಬವರು ಚಿತ್ರೀಕರಿಸಿದ ವೀಡಿಯೊ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲು ಸಹಕರಿಸಿದ್ದ ಆರೋಪದಲ್ಲಿ ರೋಶನ್ ಬೊನಿಫಾಸ್ ಮಾರ್ಟಿಸ್ ಎ5 ಆರೋಪಿಯಾಗಿದ್ದಾರೆ. ಪೊಲೀಸರ ಮೇಲೆ ಜನ ಸಮುದಾಯಗಳ ನಡುವೆ ವೈಮನಸ್ಸು, ದ್ವೇಶ ಭಾವನೆ ಹುಟ್ಟಿಸುವ ಉದ್ದೇಶದಿಂದಲೇ ಸಾರ್ವಜನಿಕ ಕಿಡಿಗೇಡಿತನಕ್ಕೆ ಪ್ರಚೋದನಕಾರಿಯಾಗುವಂತೆ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮುಖಾಂತರ ಹರಡಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.