ಹರಿಹರ: ಆಸ್ತಿ ತೆರಿಗೆ ರಿಯಾಯಿತಿ ಪಾವತಿ ಅವಧಿ ಆ.31 ರವರೆಗೆ ವಿಸ್ತರಣೆ

ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರುಗಳಿಗೆ ಆಸ್ತಿ ತೆರಿಗೆ ಮೇಲೆ ನೀಡಲಾಗಿರುವ ಶೇ.5 ರಷ್ಟು ರಿಯಾಯಿತಿ ಸೌಲಭ್ಯದ ಪಾವತಿ ಅವಧಿಯನ್ನು ಆ. 31 ರವರೆಗೆ ವಿಸ್ತರಿಸಲಾಗಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಇರುವ ಪ್ರಯುಕ್ತ ಜುಲೈ 31 ರವರೆಗೆ ಈಗಾಗಲೇ ವಿಸ್ತರಿಸಿದ್ದ ಶೇ. 5 ರಷ್ಟು ರಿಯಾಯಿತಿ ಸೌಲಭ್ಯದ ಅವಧಿಯನ್ನು ಆ.31 ರವರೆಗೆ ವಿಸ್ತರಿಸಲಾಗಿದ್ದು, ಆಸ್ತಿಮಾಲೀಕರು ನಿಗದಿತ ದಿನಾಂಕದೊಳಗೆ ಆಸ್ತಿ ತೆರಿಗೆಯನ್ನು ಪಾವತಿಸಿ ಶೇ. 5 ರಷ್ಟು ರಿಯಾಯಿತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು.
ಒಂದು ವೇಳೆ ನಿಗದಿತ ಅವಧಿಯ ಒಳಗಾಗಿ ಪಾವತಿಸದೇ ಇದ್ದಲ್ಲಿ ಸೆ.1 ರಿಂದ ಪ್ರತಿ ತಿಂಗಳು ಶೇ. 2 ರಷ್ಟು ದಂಡವನ್ನು ವಿಧಿಸಲಾಗುವುದು. ಕೂಡಲೇ ಸಾರ್ವಜನಿಕರು ತಮ್ಮ ಆಸ್ತಿಯ ಆಸ್ತಿ ತೆರಿಗೆ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಉದ್ದಿಮೆ ಪರವಾನಿಗೆ ಫೀಗಳನ್ನು ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹರಿಹರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.