School: ಕೆಸರು ಗದ್ದೆಯಾದ ಶಾಲಾ ಆವರಣ.! ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

ದಾವಣಗೆರೆ, ಜಗಳೂರು: ( School) ಜಗಳೂರು ತಾಲ್ಲೂಕಿನ ಹನುಮಂತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಪೋಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಮನೆಗೆ ತೆರಳಿದ ಘಟನೆ ನಡೆದಿದೆ.

ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಿಂದ ಅಂತರ್ಜಲ ಹೆಚ್ಚಳವಾಗಿ ಶಾಲಾ ಆವರಣದಲ್ಲಿನ ಬೋರ್ ವೆಲ್ಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಆಟದ ಮೈದಾನ ತುಂಬೆಲ್ಲಾ ನೀರು ನಿಂತು ಕೆಸರು ಗದ್ದೆಯಂತಾಗಿದೆ. ಹುಲ್ಲುಹಾಸಿನ ಪಾಚಿ ಬೆಳೆದಿದ್ದು, ದುರ್ವಾಸನೆಯೊಂದಿಗೆ ಚರಂಡಿಯಾಗಿ ಪರಿವರ್ತನೆಗೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಶಾಲಾ ಆವರಣದಲ್ಲಿ ಸಮರ್ಪಕ ರಸ್ತೆಯಿಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರುಗಳು, ಪ್ರತಿನಿತ್ಯ ಕೊಠಡಿಗಳಿಗೆ ತೆರಳಲು ಸುಗಮವಾಗಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಕೆಸರಿನಲ್ಲಿ ಕಾಲು ಜಾರಿ ಬಿದ್ದ ಉದಾಹರಣೆಗಳೂ ಇವೆ.ಶೌಚಾಲಯ ವ್ಯವಸ್ಥೆಯಿಲ್ಲ, ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ಮಳೆ ನೀರು ಕೊಠಡಿಗಳ ತರಗತಿಯಲ್ಲಿ ಸೋರುತ್ತಿರುತ್ತಿವೆ. ನಮ್ಮ ಗೋಳು ಕೇಳುವವರಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪನವರು ಶಾಲೆಗೆ ಭೇಟಿ ನೀಡಿ, ಶಾಲೆ ಆವರಣದಲ್ಲಿ ಅನಗತ್ಯ ನೀರು ಸಂಗ್ರಹವಾಗುತ್ತಿದ್ದು, ಆಟದ ಮೈದಾನವೆಲ್ಲಾ ಕೆಸರುಗದ್ದೆಯಾಗಿದೆ. ಹಲವು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಿಳಿಸಿದರೆ ಸ್ಪಂದನೆ ನೀಡುತ್ತಿಲ್ಲ. ಮೂಲ ಸೌಕರ್ಯ ಸಮಸ್ಯೆಗಳನ್ನು ಬಗೆಹರಿಸುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ನಮ್ಮ ಮಕ್ಕಳಿಗೆ ಮೂಲ ಸೌಕರ್ಯ ಕೊರತೆಯಿರುವ ಸರ್ಕಾರಿ ಶಾಲೆ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಶಿಕ್ಷಕರಿಲ್ಲದೆ ಶಾಲೆಗಳು ಮುಚ್ಚುತ್ತಿವೆ. ಆದರೆ ಇಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷರಿದ್ದರೂ ಅವಶ್ಯಕವಿರುವ ಕೊಠಡಿಗಳನ್ನು ದುರಸ್ಥಿಗೊಳಿಸುವಲ್ಲಿ, ಶಾಲಾ ಆವರಣದಲ್ಲಿ ಸ್ವಚ್ಛತೆ, ಮಣ್ಣು ಹಾಕಿ ಸುಸಜ್ಜಿತ ಆಟದ ಮೈದಾನ, ರಸ್ತೆ ಮಾಡಿಕೊಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಗ್ರಾಮದ ಮಧ್ಯಭಾಗದಲ್ಲಿರುವ ಶಾಲೆಯ ಹಳೇ ಕಟ್ಟಡದ ಕೊಠಡಿಗಳು ಅಲ್ಪಸ್ವಲ್ಪ ಹಂಚಿನ ದುರಸ್ಥಿಯಲ್ಲಿದ್ದು, ಬಳಕೆಯಿಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಪೋಷಕರು ಆರೋಪಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸುಜಾತ ರೆಡ್ಡಿಯವರು ಮಾತನಾಡುತ್ತಾ, ನಮ್ಮ ಶಾಲೆಯಲ್ಲಿ 143 ವಿದ್ಯಾರ್ಥಿಗಳು, 4 ಜನ ಶಿಕ್ಷಕರು, ಒಬ್ಬ ಅತಿಥಿ ಶಿಕ್ಷಕರಿದ್ದಾರೆ. 5 ಕೊಠಡಿಗಳಿಗೆ ಸಮಸ್ಯೆಯಿಲ್ಲ ಶಾಲಾ ಆವರಣದಲ್ಲಿ ಅನಗತ್ಯವಾಗಿ ಹರಿಯುತ್ತಿರುವ ಬೋರ್ ವೆಲ್ ನೀರು ತಡೆಗಟ್ಟಬೇಕಿದೆ. ಇದೀಗ ಸಂಗ್ರಹವಾದ ನೀರನ್ನು ಕಾಂಪೌಂಡ್ ಹೊರಗಡೆ ಹರಿಸಿ ಮಣ್ಣು ಹಾಕಿದರೆ ಮಕ್ಕಳ ಓಡಾಟಕ್ಕೆ ಸುಗಮವಾಗಲಿದೆ. ಈ ಬಗ್ಗೆ ಮೇಲಾಧಿಕಾರಿಗಳ ವರದಿ ಸಲ್ಲಿಸಲಾಗಿದೆ. ಪೋಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಸಿಓ ಬಸವರಾಜಪ್ಪ, ಬಿಆರ್ಪಿಗಳಾದ ಕೊಡದೇಶ ಕುಮಾರ್, ಜಾವಿದ್, ಸಿಆರ್ಪಿಗಳಾದ ಮಂಜಣ್ಣ, ಲೋಕೇಶ್ ಶಾಲೆಗೆ ಭೇಟಿ ನೀಡಿ ಪರಿಶೀಲನಾ ವರದಿ ತಯಾರಿಸಿದರು.
