Third wave covid: ಶ್ರಾವಣ ಆಚರಣೆ ಮುಂಜಾಗ್ರತೆ ವಹಿಸಿ: ಕೋವಿಡ್ ಅಲೆಯ ಭೀತಿ ಕಡಿಮೆಯಾಗಿಲ್ಲ – ಮಹಾಂತೇಶ್ ಬೀಳಗಿ

dc

ದಾವಣಗೆರೆ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್ ಮಾರ್ಗಸೂಚಿಯೊಂದಿಗೆ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ 75 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಕೋವಿಡ್-19 ನಿಯಂತ್ರಣದ ಕುರಿತು ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಕೋವಿಡ್ ಮಾರ್ಗಸೂಚಿಗಳನ್ವಯ ಆ ದಿನ ಸಂಜೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದು ಸಿಟಿ ಸ್ಕ್ಯಾನ್ ಅಲ್ಲಿ ಪಾಸಿಟಿವ್ ಬರುತ್ತಿದೆ. ಇಂತಹ ಕೋವಿಡ್ ಲೈಕ್ ಇಲ್‌ನೆಸ್ ವರದಿ ಹೆಚ್ಚಾಗಿ ಬರುತ್ತಿದ್ದು, ಉಸಿರಾಟದ ತೊಂದರೆಯಿಂದ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಕೋವಿಡ್ ಸೋಂಕು ಕಂಡುಬಂದ ತಕ್ಷಣ ಮನೆಯಲ್ಲೇ ಚಿಕಿತ್ಸೆ ಪಡೆದು ಕೊನೆಯಲ್ಲಿ ಬರಬೇಡಿ. ಮುಂಚಿತವಾಗೆ ಬಂದರೆ ಜೀವ ಉಳಿಸಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇಂದು 7 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 14 ಜನ ಬಿಡುಗಡೆ ಹೊಂದಿದ್ದಾರೆ. ಪಾಸಿಟಿವಿಟಿ ರೇಟ್ ಶೇ.1 ಕ್ಕಿಂತ ಕಡಿಮೆ ಇದ್ದು ಯಾವುದೇ ಕಾರಣಕ್ಕೂ ಜನರು ಮೈ ಮರೆಯುವಂತಿಲ್ಲ ಹಾಗೂ ಡೆಲ್ಟಾದ ಹೊಸ ತಳಿಯ 4 ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, 1 ಎಂಐಸಿಯು ಅಲ್ಲಿ ಸಾವನ್ನಪ್ಪಿದ್ದಾರೆ. ಉಳಿದಂತೆ ಎಲ್ಲರೂ ಗುಣಮುಖರಾಗಿದ್ದಾರೆ. ಹಾಗೂ ಬ್ಲ್ಯಾಕ್ ಫಂಗಸ್ ನಿಂದ ಒಟ್ಟು 4 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಇಓ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಜಿಲ್ಲೆಯಲ್ಲಿ 180 ಮಕ್ಕಳು ಎಸ್‌ಎಎಂ, 8506 ಮಕ್ಕಳು ಎಂಎಎಂ ಪ್ರಕರಣಗಳು ವರದಿಯಾಗಿದ್ದು, ಆ ಮಕ್ಕಳ ತಾಯಂದಿರಿಗೆ ವ್ಯಾಕ್ಸಿನೇಷನ್ ಕೊಡಲಾಗುತ್ತಿದೆ. ಗ್ರಾಸೀಮ ಸಂಸ್ಥೆ ವತಿಯಿಂದ ಸಿಎಸ್‌ಆರ್ ಅಡಿಯಲ್ಲಿ 25 ಲಕ್ಷ ರೂ., ಅನುದಾನ ಬಿಡುಗಡೆ ಮಾಡಿದೆ.

ಜಿಲ್ಲಾ ಪಂಚಾಯತ್ ವತಿಯಿಂದ 2 ಇಮ್ಯೂನಿಟಿ ಬ್ಯೂಸ್ಟರ್ ಗಳನ್ನು ಒದಗಿಸುತ್ತಿದ್ದೇವೆ. ಆರೋಗ್ಯ ಇಲಾಖೆಯಿಂದ ಅಂಗನವಾಡಿ ಮಕ್ಕಳಿಗೆ ಶೇ.60 ರಷ್ಟು, ಶಾಲಾ ಮಕ್ಕಳಿಗೆ ಶೇ.40 ರಷ್ಟು ಮಕ್ಕಳಿಗೂ ಆರೋಗ್ಯ ತಪಾಸಣೆ ಆಗಿದೆ ಎಂದು ಮಾಹಿತಿ ನೀಡಿದರು.

ಶ್ರಾವಣ ಮಾಸ ಆಚರಣೆ ಮುಂಜಾಗ್ರತೆ ವಹಿಸಿ: ಪ್ರಸ್ತುತ ಕೋವಿಡ್ ಎರಡನೇ ಅಲೆಯ ಭೀತಿ ಇನ್ನೂ ಕಡಿಮೆಯಾಗಿಲ್ಲ. ಮತ್ತೊಂದೆಡೆ, ಮೂರನೇ ಅಲೆ ಯಾವುದೇ ಸಂದರ್ಭದಲ್ಲಿ ಜನರ ಜೀವನವನ್ನು ಮತ್ತಷ್ಟು ಹೈರಾಣುಗೊಳಿಸುವ ಸಾಧ್ಯತೆಯಿದೆ.

ದೇವಸ್ಥಾನಗಳಲ್ಲಿ ದೇವರ ದರ್ಶನ ಹೊರತುಪಡಿಸಿ ಸೇವೆ, ಪ್ರಸಾದ, ಮುಡಿ ತೆಗೆಯುವುದನ್ನು ನಿಷೇಧಿಸಲಾಗಿದೆ. ಜಾತ್ರೆ, ಉತ್ಸವ, ಮೆರವಣಿಗೆ ಮತ್ತು ಧಾರ್ಮಿಕ ಸಭೆ, ಸಮಾರಭಗಳನ್ನು ನಿರ್ಬಂಧಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್‌ಓ ಡಾ.ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!