ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರದ ಕಾರ್ಮಿಕರ ವಿವಿಧ ಬೇಡಿಕೆಗಳ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ : ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರದ ಕಾರ್ಮಿಕರಿಗೆ ಕನಿಷ್ಟ ವೇತನ , ಇತರೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಬಾವಿಹಾಳು ಗ್ರಾಮದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದ ಬಳಿ ಕರ್ನಾಟಕ ಸ್ಟೇಟ್ ವಿಂಡ್ ಅಂಡ್ ಸೋಲಾರ್ ಎನರ್ಜಿ ಎಂಪ್ಲಾಯೀಸ್ ಯೂನಿಯನ್ ಎಐಯುಟಿಯುಸಿ ಸಂಯೋಜಿತ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟಿಸಿದರು .
ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು , ಬಾವಿಹಾಳ್ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲ ಮಾಲೀಕರಾದ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ನಡಿ ಗುತ್ತಿಗೆ ಪಡೆದ ವಿಕ್ರಂ ಸೋಲಾರ್ ಮತ್ತು ಫೈನಿಯರ್ ಸೆಕ್ಯೂರಿಟಿ ಸೆಲ್ಯೂಷನ್ಸ್ ಪ್ರೈಲಿನಡಿ ಸುಮಾರು 26 ಕಾರ್ಮಿಕರು ಕೆಲಸ ಮಾಡುತ್ತಿದ್ದು , ಸಂಸ್ಥೆಯವರು 4 ವರ್ಷದಿಂದ ಕೆಲಸ ಮಾಡುತ್ತಿರುವ 16 ಜನ ಭದ್ರತಾಕಾರರಿಗೆ ಯಾವುದೇ ಸೌಲಭ್ಯ , ಕನಿಷ್ಟ ವೇತನ ನೀಡುತ್ತಿಲ್ಲ ಎಂದರು .
ಸುಮಾರು 4 ವರ್ಷದಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳಾದ ಕನಿಷ್ಟ ವೇತನ , ರಜೆ ಸೌಲಭ್ಯ , ವಾಹನ ವ್ಯವಸ್ಥೆ ಬೋನಸ್ , ಇಎಸ್ಐ , ಇಪಿಎಫ್ ಜೊತೆಗೆ ನೇಮಕಾತಿ ಪತ್ರ , ಗುರುತಿನ ಪತ್ರ , ವೇತನ ಚೀಟಿ ನೀಡುತ್ತಿಲ್ಲ . ಈ ಬಗ್ಗೆ ಪ್ರಶ್ನಿಸಿದರೆ ನಮ್ಮ ಸಮಸ್ಯೆ ಪರಿಹರಿಸುವ ಬದಲಿಗೆ ಕಾರ್ಮಿಕರಿಗೆ ಕಿರುಕುಳ ನೀಡುವ , ಕೆಲಸದಿಂದ ತೆಗೆದು ಹಾಕುವ , ವೇತನ ಕಡಿತ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು . ಐದು ತಿಂಗಳ ಬಾಕಿ ವೇತನ , ಪಿಎಫ್ ತಕ್ಷಣ ನೀಡಬೇಕು . ಎಎಲ್ ಮತ್ತು ಎನ್ಎಫ್ಎಚ್ ರಜೆ ದಿನ ನೀಡಬೇಕು . ವರ್ಷಕ್ಕೊಮ್ಮೆ ಬೋನಸ್ ನೀಡಬೇಕು . ಪ್ರತಿ ತಿಂಗಳು ವೇತನ ಚೀಟಿ ಕೊಡಬೇಕು . 2017 ರಿಂದ ಬಾಕಿ ಇರುವ ಇಎಸ್ಐ ನೀಡಬೇಕು . ಕಾರ್ಮಿಕರೆಲ್ಲರಿಗೂ ಗುರುತಿನ ಚೀಟಿ ನೀಡಬೇಕು . ಪ್ರತಿ ವರ್ಷ 2 ಜತೆ ಸಮವಸ್ತ್ರ , ಶೂ , ರೈನ್ಕೋಟ್ ಸೇರಿದಂತೆ ಇತರೆ ರಕ್ಷಣಾ ಪರಿಕರಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು .
ವೇತನವನ್ನು 5 ತಾರೀಖಿನ ಒಳಗಾಗಿ ನೀಡಬೇಕು . ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಬಾವಿಹಾಳ ಗ್ರಾಮದ ಕಂಪನಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದರು . ಸಂಘಟನೆಯ ಪ್ರಭು , ಕೆ.ವಿನಾಯಕ ಪಿ.ಕೆ.ವಿನಯಕುಮಾರ , ದೇವರಾಜ , ಪರಶುರಾಮಪ್ಪ , ಕೆ.ನಾಗರಾಜ , ಕೆ.ಎಲ್.ಚಂದ್ರಶೇಖರ , ಕುಬೇರಪ್ಪ , ಎಚ್.ರಂಗಪ್ಪ , ಪಿ.ಕೆ.ರಘು , ಬಿ.ಎಂ.ಬಸವರಾಜ , ಕೆ.ಜೆ.ಲೋಕೇಶಣ್ಣ ಮತ್ತಿತರರು ಇದ್ದರು .
