ದಾವಣಗೆರೆಯ ದುಡಾದಲ್ಲಿ ಉಲ್ಟಾ ಹಾರಿದ ರಾಷ್ಟ್ರಧ್ವಜ: ನೆಟ್ಟಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ

ದಾವಣಗೆರೆ: 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಡಿ ದೇಶವೇ ಸಂಭ್ರಮಿಸುತ್ತಿದೆ. ಆದರೆ ದಾವಣಗೆರೆ ನಗರದ ಸರ್ಕಾರಿ ಕಚೇರಿಯಲ್ಲಿ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿದ ಘಟನೆಯ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ನಿಜಕ್ಕೂ ಸ್ವಾತಂತ್ರ್ಯ ದಿನಾಚರಣೆ ಎಂಬುದು ಬಲು ದೊಡ್ಡ ಹಬ್ಬ, ಉತ್ಸವ. ಅಂದು ದಸರೆಯ ಪಂಜಿನ ಕವಾಯತಿಗೆ ಸೇರುವಷ್ಟು ಜನ ಸೇರಬೇಕು, ರಾಷ್ಟ್ರಗೀತೆಯನ್ನು ಒಕ್ಕೊರಲಿನಿಂದ ಹೇಳಬೇಕು, ರಾಷ್ಟ್ರಧ್ವಜಕ್ಕೆ ವಂದಿಸಬೇಕು, ಹಾಗೆಲ್ಲ ಯೋಜನೆಯನ್ನು ರೂಪಿಸಿಕೊಂಡು ಕೊನೆಕ್ಷಣದಲ್ಲಿ ರಾಷ್ಟ್ರಧ್ವಜವನ್ನ ಉಲ್ಟಾ ಹಿರಿಸಿದ್ದು ಎಂತಹ ದೊಡ್ಡ ತಪ್ಪು ಅಂತೀರಾ.!
ಧ್ವಜಾರೋಹಣದ ಸಂದರ್ಭದಲ್ಲಿ ಹಸಿರು ಬಣ್ಣ ಮೇಲೆ ಕೇಸರಿ ಬಣ್ಣ ಕೆಳಗೆ ಇರುವುದನ್ನು ಗಮನಿಸದೆ ದುಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಧ್ವಜಾರೋಹಣ ಮಾಡಿದ್ದಾರೆ. ಸ್ಥಳದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಕುಮಾರಸ್ವಾಮಿ, ಎ ಇ ಇ ಶ್ರೀಕಾರ್, ದುಡಾ ಕಚೇರಿಯ ಹಿರಿಯ ಕಿರಿಯ ಸಿಬ್ಬಂದಿಗಳ ಸಮ್ಮುಖದಲ್ಲಿ ಇಂತಹ ಯಡವಟ್ಟು ನಡೆದಿದೆ.
ರಾಷ್ಟ್ರಧ್ವಜ ಉಲ್ಟಾ ಹಾರಿಸಿದ್ದರ ಬಗ್ಗೆ ಯಾರಿಗೂ ತಕ್ಷಣಕ್ಕೆ ಗಮನಕ್ಕೆ ಬಂದಿಲ್ಲ. ಎಲ್ಲರೂ ಧ್ವಜಾರೋಹಣ ನಂತರ ರಾಷ್ಟ್ರಗೀತೆ ಹೇಳಿ ಕಚೇರಿಗೆ ತೆರಳಿದ್ದಾರೆ, ಎಲ್ಲರೂ ಧ್ವಜಕ್ಕೆ ಸೇಲ್ಯೂಟ್ ಹೊಡೆದು ಚಪ್ಪಾಳೆ ಕೂಎ ತಟ್ಟಿದ್ದಾರೆ ಹಾಗೂ ರಾಷ್ಟ್ರೀಯ ದಿನಾಚರಣೆ ಬಗ್ಗೆ ಭಾಷಣ ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ನಡೆದು ಸರಿಸುಮಾರು 30 ನಿಮಿಷಗಳ ನಂತರ ಧ್ವಜವನ್ನು ಉಲ್ಟಾ ಹಾರಿಸಿರುವುದು ಗೊತ್ತಾಗಿ ಎಲ್ಲರೂ ತಬ್ಬಿಬ್ಬುಗೊಂಡಿದ್ದಾರೆ. ತಕ್ಷಣವೇ ಧ್ವಜವನ್ನ ಕೆಳಗಿಳಿಸಿ ಮತ್ತೆ ಸರಿಪಡಿಸಲಾಗಿದೆ.
ದುಡಾ ಕಚೇರಿಯಲ್ಲಿ ನಡೆದ ಧ್ವಜಾರೋಹಣದಲ್ಲಿ ಆದ ಪ್ರಮಾದವನ್ನ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಅಲ್ಲದೇ Flag Code Act ಅಡಿ ಕಾನೂನು ಹೋರಾಟ ಮಾಡುವುದಕ್ಕೆ ಚಿಂತಿಸಲಾಗಿದೆ ಎನ್ನುತ್ತಾರೆ ಹೋರಾಟಗಾರರು.