ಆರೋಗ್ಯ ಇಲಾಖೆಯ ಡಿ ಗ್ರೂಪ್ ಗುತ್ತಿಗೆ ನೌಕರರ ಸಮಸ್ಯೆ ಬಗೆಹರಿಸಿ: ಜಿಪಂ ಸಿಇಒ ಗೆ ಸಿಐಟಿಯು ಮನವಿ

ದಾವಣಗೆರೆ: ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ‘ಡಿ’ ಗುತ್ತಿಗೆ ನೌಕರರ ಬಾಕೀ ವೇತನ, ಕೋವಿಡ್ ರಿಸ್ಕ್ ಅಲೋಯೆನ್ಸ್ ಪಾವತಿ ಮಾಡುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು ಜಿಲ್ಲಾ ಪಂಚಾಯತ್ ಸಿಇಓ ಅಧ್ಯಕ್ಷತೆಯಲ್ಲಿ ಜಂಟಿ ಸಭೆ ನಡೆಸುವಂತೆ ಒತ್ತಾಯಿಸಿ ಸಿಐಟಿಯು ಕೇಂದ್ರ ಕಾರ್ಮಿಕ ಸಂಘಟನೆಯಿಂದ ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಎಲ್ಲಾ ನೌಕರರಿಗೆ ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಒದಗಿಸಬೇಕು, ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು, ವಾರದ ರಜೆ ಮತ್ತು ಪರಿಹಾರ ರಜೆ ಕೊಡಬೇಕು ಹಾಗೂ ವಾರದ ರಜೆ ಮತ್ತು ರಜಾ ದಿನಗಳಲ್ಲಿ ಕೆಲಸ ಮಾಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಓಟಿ ಪಾವತಿಸಲು ಕ್ರಮ ಕೈಗೊಳ್ಳಬೇಕು, ಕುಂದು-ಕೊರತೆಗಳ ಸಮಿತಿ ರಚಿಸಬೇಕು ಹಾಗೂ ಮಾಸಿಕ ಸಭೆ ಕರೆಯಬೇಕು ಎಂದು ಆಗ್ರಹಿಸಲಾಯಿತು.
ಇದೇ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು, ಕೋವಿಡ್‌ನ ಸಂಕಷ್ಟದ ಸಮಯದಲ್ಲಿ ಗ್ರೂಪ್ ‘ಡಿ’ ನೌಕರರು ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಅವರಿಗೆ ವೇತನ ಪಾವತಿಯಾಗುತ್ತಿಲ್ಲ ಮತ್ತು ಸರ್ಕಾರದ ಆದೇಶದಂತೆ ನೌಕರರ ಬ್ಯಾಂಕ್ ಖಾತೆಗೆ ಪಾವತಿಯಾಗಬೇಕಿದ್ದ 10ಸಾವಿರ ಕೋವಿಡ್ ರಿಸ್ಕ್ ಅಲೋಯೆನ್ಸ್ ನೀಡಲಾಗಿಲ್ಲ. ವಾರದಲ್ಲಿ ಒಂದು ದಿನ ರಜೆ ಇಲ್ಲದೇ ಇರುವುದರಿಂದ ನೌಕರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ, ಎಲ್ಲಾ ಬೇಡಿಕೆಗಳನ್ನ ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೌಕರರು ಅನಿರ್ಧಿಷ್ಟ ಅವಧಿ ಮುಷ್ಕರಕ್ಕೆ ಮಾಡಲು ಜಿಲ್ಲಾಡಳಿತವೇ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರೂಪ್ ‘ಡಿ’ ನೌಕರರಾದ ಈರಮ್ಮ, ಪಲ್ಲವಿ, ಕವಿತ, ಮಮತಾ, ರತ್ನಮ್ಮ, ಲಕ್ಷ್ಮೀ, ಮನೋಜ, ವಿಕಾಸ್, ಪ್ರಭಾಕರ, ದೇವರಾಜು ಇತರರು ಇದ್ದರು.