ಪರಿಶಿಷ್ಟ ಯೋಜನೆ ಪಡೆಯಲು ವಿಶೇಷ ನಿಯಮ ಜಾರಿಗೆ ವಾಲ್ಮೀಕಿ ನಿಗಮದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ಅಂಜು ಕುಮಾರ್

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಶಿಷ್ಟರ ಅಭ್ಯುದಯಕ್ಕೆ ಜಾರಿ ಮಾಡಿದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಪಡೆಯಲು ವಿಶೇಷ ನಿಯಮ ಜಾರಿಗೊಳಿಸುವಂತೆ ಸರ್ಕಾರಗಳಿಗೆ ಸಾಮಾಜಿಕ ಕಾರ್ಯಕರ್ತ ಪಿ.ಬಿ. ಅಂಜು ಕುಮಾರ್ ನೇತೃತ್ವದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ವಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟರ ಏಳಿಗೆಗಾಗಿ ಹಲವಾರು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸರ್ಕಾರಗಳು ರೂಪಿಸಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಪರಿಶಿಷ್ಟರಿಗೆ ಹಲವಾರು ತೊಡಕುಗಳು ಇರುವುದರಿಂದ ಬಜೆಟ್ನಲ್ಲಿ ಪರಿಶಿಷ್ಟರ ಏಳಿಗೆಗೆ ಘೋಷಿಸಿದ ಅನುದಾನ ಪರಿಶಿಷ್ಟರ ಕಲ್ಯಾಣಕ್ಕೆ ಬಳಕೆಯಾಗದೆ ಉಳಿಯುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಕೆಲವೊಂದು ಯೋಜನೆಯನ್ನು ಪಡೆಯಲು ಹಲವಾರು ತೊಡಕುಗಳಿವೆ. ಸ್ವಯಂ ಉದ್ಯೋಗ ಯೋಜನೆ ಉದ್ಯಮಶೀಲತೆ, ಯೋಜನೆಯ ಪ್ರವಾಸಿ ಐರಾವತ ಟ್ಯಾಕ್ಸಿ, ಬ್ಯಾಂಕಿನ ನೆರವಿನ ಸಹಯೋಗದಿಂದ ಸರ್ಕಾರ ಪ್ರೋತ್ಸಾಹ ಧನ ನೀಡುತ್ತದೆ. ಆದರೆ ಈಗಿನ ನಿಯಮಗಳ ಅನುಸಾರ ಸಿಬಿಲ್ ರೇಟ್ ಕಡಿಮೆ ಅಥವಾ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಟಾರ್ಗೆಟ್ ಇಲ್ಲ ಎನ್ನುವ ಉತ್ತರದೊಂದಿಗೆ ಬ್ಯಾಂಕುಗಳು ಪರಿಶಿಷ್ಟರಿಗೆ ಯೋಜನೆಯ ಲಾಭ ಪಡೆಯಲು ಅಡ್ಡಿಪಡಿಸುತ್ತಿವೆ ಎಂದು ಅವರು ದೂರಿದ್ದಾರೆ.
ಇಂದಿನ ದಿನಗಳಲ್ಲಿ ಆರ್ಥಿಕ ದುರ್ಬಲರು ಮತ್ತು ಪರಿಶಿಷ್ಟ ಕೂಲಿಕಾರ್ಮಿಕರು ಸರ್ವೇ ಸಾಮಾನ್ಯವಾಗಿ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆಯುವುದು ಮತ್ತು ಪಡೆದ ಸಾಲವನ್ನು ಇಂದಿನ ಆರ್ಥಿಕ ದುಸ್ಥಿತಿಯ ನಡುವೆ ಸಮಯಕ್ಕೆ ಸರಿಯಾಗಿ ಪಾವತಿಸದೇ ಇರುವುದರಿಂದ ಸಾಮಾನ್ಯವಾಗಿ ಸಿಬಿಲ್ ರೇಟ್ ಕಡಿಮೆಯಾಗುತ್ತದೆ. ಆದ್ದರಿಂದ ಪರಿಶಿಷ್ಟರ ಅಭಿವೃದ್ಧಿಗಾಗಿ ರೂಪಿಸಿರುವ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಬೇಕೆಂದರೆ ಬ್ಯಾಂಕುಗಳ ಈಗಿನ ನಿಯಮಗಳನ್ನು ಬದಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರ ಹೊಸ ನಿಯಮ ರೂಪಿಸ ಬೇಕು ಹಾಗೂ ಡಿಸಿಸಿ ಬ್ಯಾಂಕ್, ಕೋ – ಆಪ್ . ಸೊಸೈಟಿ ಹಾಗೂ ಖಾಸಗಿ ಫೈನಾನ್ಸ್ಗಳ ಸಹಯೋಗದೊಂದಿಗೆ ಯೋಜನೆಯ ಅನುಷ್ಠಾನಕ್ಕೆ ಹೊಸ ನಿಯಮಗಳನ್ನು ಜಾರಿಗೊಳಿಸಬೇಕು. ಇದರಿಂದ ಪರಿಶಿಷ್ಟರ ಏಳಿಗೆ, ಸರ್ಕಾರದ ಉದ್ದೇಶ, ಸಂವಿಧಾನದ ಆಶಯ ಈಡೇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್.ಹೆಚ್.ಹಾಲೇಶ್, ಪಿ.ಬಿ. ಅಂಜುಕುಮಾರ್, ಗೋಶಾಲೆ ಬಸವರಾಜ್, ಅಶೋಕ್ ಎಡೆಹಳ್ಳಿ, ಪ್ರಕಾಶ್ ಆವರಗೆರೆ, ಸುರೇಶ್ ಗೋಶಾಲೆ, ಬಿ.ಎನ್. ಪಾಲಾಕ್ಷ, ಅಜಯ್ ನಿಟ್ಟೂರು, ಬಾಲರಾಜು ಬಿ ಹಾಗೂ ಇನ್ನೂ ಅನೇಕರು ಹಾಜರಿದ್ದರು.