ಬಡವರಿಗೆ ಅತ್ಯುತ್ತಮ ಬಡಾವಣೆ ನಿರ್ಮಾಣ ಮಾಡಬೇಕೆಂಬ ಕನಸು ನನಸು ಮಾಡ್ತೀನಿ – ದೇವರಮನೆ ಶಿವಕುಮಾರ

ದಾವಣಗೆರೆ: ನನ್ನ ನಿರ್ಧಾರ ಧರ್ಮವಾಗಿತ್ತು. ಧರ್ಮವಾಗಿ ನಡೆದುಕೊಂಡಿದ್ದೇನೆ. ಹಾಗಾಗಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರೂ ಯಾವ ಮಾತು ಆಡಿರಲಿಲ್ಲ. ಬಡವರಿಗೆ ಅತ್ಯುತ್ತಮ ಬಡಾವಣೆ ನಿರ್ಮಾಣ ಮಾಡಬೇಕೆಂಬ ಕನಸಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆಂದು ದುಡಾದ ನೂತನ ಅಧ್ಯಕ್ಷ ದೇವರಮನೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಪಕ್ಷ ನನಗೆ ದುಡಾ ಅಧ್ಯಕ್ಷ ಸ್ಥಾನ ನೀಡಿರುವುದು ತಮಗೆ ಖುಷಿ ತಂದಿದೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಅಭಿವೃದ್ಧಿ ಕೆಲಸಗಳಿಗೆ ಪ್ರಾಧಾನ್ಯತೆ ನೀಡಿ, ಒಳ್ಳೆಯ ಆಡಳಿತ ಕೊಡಲು ಪ್ರಯತ್ನಿಸುವುದಾಗಿ ಹೇಳಿದರು.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಕಾರಣ ಎಲ್ಲರಿಗೂ ತಿಳಿದಿದೆ. ಆ ಪಕ್ಷದಲ್ಲಿದ್ದಾಗ ಯಾವ ನೋವಿತ್ತು. ಏನೆಲ್ಲಾ ಸಮಸ್ಯೆ ಅನುಭವಿಸಿದೆ ಎಂಬುದು ನನಗೆ ಮಾತ್ರ ಗೊತ್ತು ಎಂದಿದ್ದಾರೆ.
ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ಎಸ್. ಎ. ರವೀಂದ್ರನಾಥ್, ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಆಶೀರ್ವಾದ, ಹಾರೈಕೆಯಿಂದಾಗಿ ತಮಗೆ ದೂಡಾ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಈ ಜವಾಬ್ದಾರಿಯನ್ನು ನೀಡಲು ನಾಯಕರೇ ಕಾರಣ, ಅವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಹೇಳಿದರು.