Online Gambling:ಪೊಲೀಸ್ ತಿದ್ದುಪಡಿ ವಿಧೇಯಕಕ್ಕೆ ಸರ್ಕಾರದಿಂದ ಅಸ್ತು: ಅನ್ ಲೈನ್ ದಂಧೆಗೆ ಒಂದು ವರ್ಷದಿಂದ ಮೂರು ವರ್ಷದ ತನಕ ಜೈಲು ಶಿಕ್ಷೆ,ದಂಡ
ಬೆಂಗಳೂರು: ಆನ್ ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವಂತೆ ಹಲವು ದಿನಗಳಿಂದ ಎದ್ದಿದ್ದ ಕೂಗಿಗೆ ಕೊನೆಗೂ ಮಣಿದಿರುವ ಸರ್ಕಾರ ಪೋಲೀಸ್ ತಿದ್ದುಪಡಿ ವಿಧೇಯಕ (2021)ದಲ್ಲಿ ಆನ್ ಲೈನ್ ಜೂಜು, ಬೆಟ್ಟಿಂಗ್ ಆಡಿದವರಿಗೆ ಒಂದು ವರ್ಷದಿಂದ ಮೂರು ವರ್ಷದ ತನಕ ಜೈಲು ಶಿಕ್ಷೆ, ಒಂದು ಲಕ್ಷದ ತನಕ ದಂಡ ವಿಧಿಸುವ ಹೊಸ ತಿದ್ದುಪಡಿ ಮಾಡಿದೆ.
ಅಷ್ಟೇ ಅಲ್ಲದೇ ಆನ್ ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಆಡುವವರಿಗೆ ಸಹಾಯ ಮಾಡಿದವರಿಗೆ 6 ತಿಂಗಳ ತನಕ ಜೈಲು, ಹತ್ತು ಸಾವಿರ ದಂಡ ವಿಧಿಸುವುದಾಗಿ ವಿಧೇಯಕ ತಂದಿದೆ.
ಈ ಹಿಂದೆ ಪ್ಲೇವಿನ್, ಲಾಟರಿ, ಜೂಜು ಆಡಿ ಮನೆ ಮಠ ಕಳೆದುಕೊಂಡ ಹಲವು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಈಗ ಆನ್ ಲೈನ್ ಬೆಟ್ಟಿಂಗ್ ದಂಧೆಯಿಂದಾಗಿ ಕಡಿಮೆ ಹಣಕ್ಕೆ ಉಚಿತವಾಗಿ ಸಿಗುವ ನೆಟ್ ವರ್ಕ್ ನಿಂದಾಗಿ ಹಲವರು, ಆನ್ ಲೈನ್ ಬೆಟ್ಟಿಂಗ್ ಗೆ ದಾಸರಾಗಿದ್ದರು.
ಇದಕ್ಕೆ ಕಡಿವಾಣ ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿಯೇ ಕೂಗು ಎದ್ದಿತ್ತು. ಹಲವು ಸಾಮಾಜಿಕ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದರು.
ಕೊನೆಗೂ ನ್ಯಾಯ ಸಿಕ್ಕಿದ್ದು ಸರ್ಕಾರ ಆನ್ ಲೈನ್ ಬೆಟ್ಟಿಂಗ್ ಗೆ ಬೀಗ ಹಾಕಿದೆ. ಇನ್ಮುಂದೆ ಯಾರಾದರೂ ಆನ್ ಲೈನ್ ಬೆಟ್ಟಿಂಗ್ ಆಡಿದ್ದೇ ಆದರೆ, ಅಥವಾ ಅವರಿಗೆ ಸಹಾಯ ಮಾಡಿದ್ದೇಯಾದರೆ ಲಕ್ಷಗಟ್ಟಲೆ ದಂಡಕಟ್ಟಿ, ಕಂಬಿ ಎಣಿಸುವುದಂತೂ ಫಿಕ್ಸ್!