ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಯಾರು ತಡೆ ಹಾಕಿಲ್ಲ: ಬ್ರೇಕ್ ಹಾಕಿಕೊಳ್ಳುವುದು ಅವರ ಕೈಯಲ್ಲಿದೆ – ಬಿ.ವೈ ವಿಜಯೇಂದ್ರ

ದಾವಣಗೆರೆ: ಬಿ ಎಸ್ ಯಡಿಯೂರಪ್ಪ ಅವರು ಪಕ್ಷ ಬಲವರ್ಧನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಅವರ ರಾಜ್ಯ ಪ್ರವಾಸಕ್ಕೆ ಯಾರು ತಡೆ ಹಾಕಿಲ್ಲ. ಬ್ರೇಕ್ ಹಾಕಿಕೊಳ್ಳುವುದೇನಿದ್ದರು ಅವರ ಕೈಯಲ್ಲಿಯೇ ಇದೆ ಎಂದು ರಾಜ್ಯ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಅವರಿಗೆ ರಕ್ತಗತವಾಗಿ ಬಂದಿದ್ದು, ಪಕ್ಷ ಬಲಪಡಿಸಲು ರಾಜ್ಯದ ಮುಖಂಡರ ಜೊತೆ ಅವರು ಪ್ರವಾಸ ಮಾಡಲಿದ್ದಾರೆ. ಈಗಾಗಲೇ ಮೈಸೂರು, ಶಿವಮೊಗ್ಗ ಜಿಲ್ಲೆಗಳ ಪ್ರವಾಸ ಮಾಡಿರುವ ಬಿ.ಎಸ್ವೈ ಈಗ ದಾವಣಗೆರೆಗೆ ಬರಲಿದ್ದಾರೆ ಎಂದರು.
ತಾವು ಚುನಾವಣೆ ನಿಲ್ಲುವ ಬಗ್ಗೆ ಯೋಚಿಸಿಲ್ಲ. ಯಾವುದೇ ಉಪಚುನಾವಣೆ ನಿಲ್ಲುವುದಕ್ಕೆ ತಲೆಕೆಡಿಸಿಕೊಂಡಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು, ರಾಜ್ಯದ ಯಾವ ಭಾಗದಲ್ಲಿ ಟಿಕೆಟ್ ಕೊಟ್ಟರೂ ನಾನು ಚುನಾವಣೆ ನಿಂತು ಎದುರಿಸಲು ಸಿದ್ದನಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಚುನಾವಣೆಯಲ್ಲಿ ನನ್ನ ಉಸ್ತುವಾರಿ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ. ಮುಂದೆ ಸಿಎಂ ನೇತೃತ್ವದಲ್ಲಿ ಚುನಾವಣೆ ಎಂದು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಆಗಿನ ಬೆಳವಣಿಗೆ ನೋಡಿಕೊಂಡು ಅವರು ತೀರ್ಮಾನ ಮಾಡುತ್ತಾರೆ ಎಂದರು.
ದೇವಾಲಯ ತೆರವು:
ಮೈಸೂರಿನಲ್ಲಿ ಅಧಿಕಾರಿಗಳು ಸಂಬಂಧಿಸಿದವರ ಜತೆಗೆ ಚರ್ಚೆ ನಡೆಸದೆ ದುಡುಕಿ ದೇವಾಲಯಗಳನ್ನು ತೆರವುಗೊಳಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.