ದೇಶ ಅಭದ್ರ ಮಾಡುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಕೆಲ ಅಧಿಕಾರಿಗಳು ಕೈ ಜೋಡಿಸಿದ್ದಾರೆ – ಸಿಎಂ ಬೊಮ್ಮಾಯಿ ಹೊಸ ಬಾಂಬ್

ದಾವಣಗೆರೆ: ಸ್ಪಷ್ಟ ಸಿದ್ಧಾಂತ, ನಿಖರ ವೈಚಾರಿಕತೆ ಮತ್ತು ದೇಶದ ಬಗ್ಗೆ ನಿಖರ ನಿರ್ಣಯವಿಲ್ಲದ ಕಾಂಗ್ರೆಸ್ ಸ್ವಾತಂತ್ರ್ಯದ ಅಲೆಯ ಮೇಲೆ ರಾಜಕಾರಣ ಮಾಡಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ತ್ರಿಶೂಲ್ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸ್ವಾತಂತ್ರ್ಯ ಚಳವಳಿಯ ಅಲೆಯ ಮೇಲೆ ರಾಜಕಾರಣ ಶುರುಮಾಡಿದ ಕಾಂಗ್ರೆಸ್ ನ್ನು ಕಂಡು ಪಕ್ಷ ವಿಸರ್ಜನೆ ಮಾಡುವಂತೆ ಮಹಾತ್ಮ ಗಾಂಧಿಯವರು ಸೂಚಿಸಿದ್ದರು. ಆದರೆ, ಸ್ವಲ್ಪ ವರ್ಷದಲ್ಲಿ ಇನ್ನೊಂದು ಗಾಂಧಿಗೆ ಕಾಂಗ್ರೆಸ್ ನವರು ಶಿಫ್ಟ್ ಆದರು ಎಂದು ಕುಟುಕಿದರು.
ಪ್ರಜಾಪ್ರಭುತ್ವ ಅಪ್ಪಿಕೊಂಡ ಗಾಂಧೀಜಿ ಒಂದು ಕಡೆಯಾದರೆ, ಡಿಕ್ಟೇಕ್ಟರ್ ಆಗಿದ್ದ ಗಾಂಧಿ ಇನ್ನೊಂದು ಕಡೆ. ಈ ಗೊಂದಲದಲ್ಲಿ ಕಾಂಗ್ರೆಸ್ ನವರು ಭರ್ತಿ 70 ವರ್ಷ ದೇಶವನ್ನು ಆಳಿ ದೇಶದಲ್ಲಿ ಹಲವು ಸಮಸ್ಯೆಗಳನ್ನು ತಂದಿಟ್ಟರು. ಎಲ್ಲಾ ಸಮಸ್ಯೆಗಳ ಬಳುವಳಿ ನಾವು ಪಡೆದುಕೊಂಡಿದ್ದೇವೆ. ಈಗ ಬಿಜೆಪಿ ಅದನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಹೊತ್ತಿದೆ ಎಂದು ಹೇಳಿದರು.
ದೇಶದ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿದ್ದು, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಲ್ಲು ಇದು ನಡೆಯುತ್ತಿದೆ. ದೇಶ ಅಭದ್ರ ಮಾಡುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಕೆಲ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ಹೊಸ ಬಾಂಬ್ ಸಿಡಿಸಿದರು.
ಮೈಸೂರಿನ ನಂಜನಗೂಡು ದೇವಾಲಯ ತೆರವು ಗೊಳಿಸರುವುದರಿಂದ ಅಲ್ಲಿನ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ.ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇನೆ. ಪಕ್ಷದ ಮಾರ್ಗದರ್ಶನ ಪಡೆದು ಆ ಭಾಗದ ಜನರ ಭಾವನೆಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತೇನೆ. ಎಲ್ಲರಿಗೂ ಒಪ್ಪಿಗೆ ಆಗುವಂತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.