ಸೋನಿಯಾಗಿಂತ ಎತ್ತರಕ್ಕೆ ಬೆಳೆಯುತ್ತಾರೆ ಅಂತಾ ಅಮರೇಂದ್ರ ಸಿಂಗ್ ರನ್ನ ಸಿಎಂ ಸ್ಥಾನದಿಂದ ಕಿತ್ತು ಹಾಕಿದ್ರು – ಸಚಿವ ಪ್ರಹ್ಲಾದ್ ಜೋಷಿ

ದಾವಣಗೆರೆ: ಎಲ್ಲದಕ್ಕೂ ವಿರೋಧ ಮಾಡುವುದೇ ವಿಪಕ್ಷದವರ ಮಾನಸಿಕತೆಯಾಗಿದ್ದು, ಲಸಿಕೆ ವಿಚಾರದಲ್ಲೂ ಅವರು ವಿರೋಧಿಸಿದ್ದಾರೆ. ವಿಪಕ್ಷದವರಿಗೆ ಲಸಿಕೆ ಜ್ವರ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದಂದು ದೇಶದಲ್ಲಿ 2.5 ಕೋಟಿ ಲಸಿಕೆ ಹಂಚಿಕೆ ಮಾಡಿದ್ದೇವೆ. ದೇಶದಲ್ಲಿ ಮೊದಲ ಡೋಸ್ ಶೇ.70 ರಷ್ಟು ಮತ್ತು ಎರಡನೇ ಡೋಸ್ ಶೇ.30 ರಷ್ಟು ಜನರಿಗೆ ಕೊಟ್ಟಿದ್ದೇವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿದ್ದು ರಾಹುಲ್, ಸೋನಿಯಾ, ಪ್ರಿಯಾಂಕಾ ಗಾಂಧಿನಾ ಎಂದು ಪ್ರಶ್ನಿಸಿದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಯಶಸ್ವಿ ಆಗುತ್ತಿದ್ದೇವೆ, ಮುಂದುವರಿದ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಲಸಿಕೆ ಹಂಚಿಕೆ ಮಾಡಿದ್ದೇವೆ, ಒಟ್ಟಿನಲ್ಲಿ ಕೋವಿಡ್ ವಿರುದ್ಧ ಸಮರ ಸಾರಿದ್ದು ಜಯಗಳಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ನಾಯಕರು, ನಮ್ಮ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿಬೆಳೆಸಿದ್ದಾರೆ. ಅವರನ್ನು ಮೂಲೆ ಗುಂಪು ಮಾಡುವ ಪ್ರಶ್ನೆಯೆ ಇಲ್ಲ. ಅವರಿಗೆ ರಾಜ್ಯ ಪ್ರವಾಸ ಮಾಡುವ ಸಂಪೂರ್ಣ ಅಧಿಕಾರ ಇದೆ. ಅವರನ್ನು ಯಾರೂ ಮೂಲೆ ಗುಂಪು ಮಾಡಿಲ್ಲ. ರಾಜ್ಯ ಪ್ರವಾಸಕ್ಕೂ ಅಡ್ಡಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ನವರು ಪಂಜಾಬ್ ನಲ್ಲಿ ರಾಹುಲ್, ಸೋನಿಯಾಗಿಂತ ಪ್ರಬಲವಾಗಿ ಬೆಳೆಯುತ್ತಾರೋ ಎನ್ನುವ ಕಾರಣಕ್ಕೆ ಅಮರೇಂದ್ರ ಸಿಂಗ್ ಅವರನ್ನು ಅಧಿಕಾರದಿಂದ ಕಿತ್ತು ಹಾಕಿದರು. ಆದರೆ, ನಮ್ಮ ಬಿಜೆಪಿಗೆ ಕಾರ್ಯಕರ್ತರನ್ನು ಬೆಳೆಸುವ ಕೆಲಸ ಮಾಡುತ್ತದೆ ಎಂದರು.