ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮುಂದೆ ವಿರೋಧ ಪಕ್ಷದಲ್ಲಿ ಕೂರುವುದು ನಿಶ್ಚಿತ


ದಾವಣಗೆರೆ: ಬಿಜೆಪಿ ರಾಜ್ಯಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದ ಬಿ.ಎಸ್. ಯಡಿಯೂರಪ್ಪ ವಿಧಾನ ಸಭೆಯ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಈಗಾಗಲೇ ಕಾಂಗ್ರೆಸ್ ಎದ್ದು ಕೂತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅಧಿಕಾರದಿಂದ ಕೆಳಗಿಳಿದ ಮೇಲೆ ಅವರು ಹೇಳಿರುವ ಸತ್ಯದ ಮಾತಿದು ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮತ್ತು ಗಡಿಗುಡಾಳ್ ಸದಸ್ಯ ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬಿಜೆಪಿಗರು ಈ ಕಾರ್ಯಕಾರಿಣಿಯಲ್ಲಿ ಬೆಲೆಏರಿಕೆ ಬಗ್ಗೆ, ದೇವಸ್ಥಾನಗಳನ್ನು ಒಡೆದು ಹಾಕುತ್ತಿರುವುದನ್ನು ನಿಲ್ಲಿಸಲು ಯಾಕೆ ನಿರ್ಣಯ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಬಿಜೆಪಿ ಮುಖಂಡರ ಜನವಿರೋಧಿ ನೀತಿ ತೋರಿಸುತ್ತದೆ ಎಂದು ದೂರಿದರು.
ಬಿಜೆಪಿ ಕಾರ್ಯಕಾರಿಣಿ ಸಭೆಗೆ ಕೋಟ್ಯಾಂತರ ರೂ., ವ್ಯಯಿಸಲಾಗಿದ್ದು, ಆ ಹಣವು ಸರ್ಕಾರದ್ದು. ಸಭೆಯಲ್ಲಿ ಪಾಲ್ಗೊಂಡಿದ್ದ ಮಂತ್ರಿ ಮಹೋದಯರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಕಾರ್ಯಕಾರಿಣಿಗೆ ಬಂದು ಹೋಗಿದ್ದಾರೆ. ಅವರಿಗೆ ಪೊಲೀಸ್ ಬಂದೋಬಸ್ತ್, ಅವರ ವಾಹನಗಳಿಗೆ ಇಂಧನ ಹೀಗೆ ಇದೆಲ್ಲಾ ಸರ್ಕಾರಿ ಖರ್ಚಿನಲ್ಲಿ ಒದಗಿಸಲಾಗಿದೆ ಎಂದು ಆಪಾದಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 70 ರೂ., ಇದ್ದ ಪೆಟ್ರೋಲ್ ಈಗ 106 ರೂ.,ಗೆ ಏರಿಕೆ ಕಂಡಿದೆ. ಅಡುಗೆ ಅನಿಲ 410 ರೂ., ಇದ್ದದ್ದು ಈಗ 887 ರೂ., ಆಗಿದೆ ಜನ ಸಾಮಾನ್ಯರು ಮನೆ ಕಟ್ಟಿಸಿಕೊಳ್ಳಲು ಆಗದಂತೆ ಸಿಮೆಂಟ್ ದುಬಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಮುಂದೆ ವಿರೋಧ ಪಕ್ಷದಲ್ಲಿ ಕೂರುವುದು ನಿಶ್ಚಿತವಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪಾಲಿಕೆ ಸದಸ್ಯ ಚಮನ್ಸಾಬ್ ಇದ್ದರು.

 
                         
                       
                       
                       
                       
                       
                       
                      