ಪ್ರತಿಷ್ಠಿತ ಬಡಾವಣೆ | ವಿದ್ಯಾವಂತ ಕಾರ್ಪೊರೇಟರ್| ವಾರ್ಡ್ ಮಾತ್ರ ಕಸದ ಕೊಂಪೆ.! ಹರೀಶ್ ಬಸಾಪುರ

ದಾವಣಗೆರೆ: ಕಳೆದ ಕೆಲವು ದಿನಗಳ ಹಿಂದೆ ನಗರದ ಪ್ರತಿಷ್ಠಿತ ವಾರ್ಡ್ ಗಳಲ್ಲಿ ಒಂದಾದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಪಾರ್ಕ್ ಅವ್ಯವಸ್ಥೆಯ ಬಗ್ಗೆ ನಾಗರಿಕರ ದೂರನ್ನು ಪರಿಚಯಿಸಲಾಗಿತ್ತು, ಆ ಸಮಸ್ಯೆ ಇನ್ನೂ ಬಗೆಹರಿದ ಲಕ್ಷಣ ಇಲ್ಲ ಅದಕ್ಕೆ ಸಂಬಂಧಪಟ್ಟಂತೆ ಯಾರು ಉತ್ತರಿಸುವ ಗೋಜಿಗೂ ಹೋಗಿಲ್ಲ.
ಈಗ ಅದೇ ವಾರ್ಡಿನ ರಸ್ತೆಗಳಲ್ಲಿ ಕಸದ ಹಾಗೂ ಮಣ್ಣಿನ ಗುಂಪೆ ಗುಂಪೆಗಳು ಕಾಣುತ್ತಿದ್ದು, ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದು ಕೂತಿದ್ದು, ಸುಮಾರು ತಿಂಗಳುಗಳಾದರೂ ಅದರ ಬಗ್ಗೆ ಗಮನಿಸದೇ ಇರುವುದು ಮಾತ್ರ ವಿಷಾದನೀಯ.
ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಉತ್ಸಾಹಿ ಯುವ ಮುಖಂಡರ ವಾರ್ಡ್ ಪರಿಸ್ಥಿತಿಯೇ ಹೀಗಾದರೆ ಬೇರೆ ವಾರ್ಡ್ಗಳ ಗತಿಯೇನು.
ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರುಗಳು ಪ್ರತಿಭಟನೆ ಮಾಡಿದಾಗ ಅಥವಾ ಬೇರೆ ಯಾವುದೇ ಸಮಸ್ಯೆಗಳು ಬಂದಾಗ ಎಲ್ಲಾ ವಿಷಯಗಳಲ್ಲಿಯೂ ಮಧ್ಯಪ್ರವೇಶಿಸಿ ಪಾಲಿಕೆಯ ತೀರ್ಮಾನಗಳನ್ನು ಸಮರ್ಥನೆ ಮಾಡಿಕೊಳ್ಳುವಂತಹ ಪಾಲಿಕೆ ಸದಸ್ಯರ ವಾರ್ಡ್ ಪರಿಸ್ಥಿತಿಯೇ ಹೀಗಾದರೆ ಹೇಗೆ ಎಂಬ ಪ್ರಶ್ನೆ ಕಾಡದೇ ಇರದು.
ಪಾಲಿಕೆ ಸದಸ್ಯರಿಗೆ ಅಭಿವೃದ್ಧಿಯ ಇಚ್ಛಾಶಕ್ತಿಯ ಕೊರತೆಯೂ ಅಥವಾ ಅಧಿಕಾರಿಗಳು ಇವರ ಮಾತನ್ನು ಕೇಳುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಮೂಡಿದ್ದು, ಸಾಧ್ಯವಾದರೆ ಆದಷ್ಟು ಬೇಗ ನಮ್ಮ ಉತ್ಸಾಹಿ ಪಾಲಿಕೆ ಸದಸ್ಯರು ಇದರ ಬಗ್ಗೆ ಗಮನ ಹರಿಸಿ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕಾಗಿ ವಿನಂತಿ.

 
                         
                       
                       
                       
                       
                       
                       
                      