Heavy Rain: ವರುಣನ ಕೃಪೆಯಿಂದ ನದಿಯಂತಾದ ರಸ್ತೆಗಳು.! ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು.!

ದಾವಣಗೆರೆ: ಇಂದು ಸಂಜೆಯಿಂದಲೇ ಶುರುವಾದ ವರುಣಾರ್ಭಟಕ್ಕೆ ನಗರದ ಜನತೆ ತತ್ತರಿಸಿದ್ದಾರೆ.
ಮಳೆರಾಯನ ಆರ್ಭಟಕ್ಕೆ ರಸ್ತೆಯ ತುಂಬೆಲ್ಲಾ ನೀರು ನದಿಯಂತೆ ಹರಿಯಿತು, ಕೆಲವೆಡೆ ಡ್ರೈನೇಜ್, ಮೋರಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆಲ್ಲಾ ನೀರು ನಿಂತು ವಾಹನ ಸವಾರರು ಹಲವು ಕಡೆ ಪರದಾಡುವಂತಾಯಿತು.
ಕೆಲ ಬಡಾವಣೆಗಳಲ್ಲಿ ಮನೆಗಳ ಒಳಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಹೇಳಿ ಕೇಳಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಯಾವ ಸ್ಮಾರ್ಟ್ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯದೆ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಮಳೆಗಾಲದಲ್ಲಿ ನೀರು ನುಗ್ಗಿ ಜನರು ಪರದಾಡುವುದಂತೂ ತಪ್ಪಿಲ್ಲ.
ಪಾಲಿಕೆಯ 15ನೇ ವಾರ್ಡಿನ ಕುಂದುವಾಡ ಬಳಿಯಲ್ಲಿ ಡ್ರೈನೆಜ್ ಬ್ಲಾಕ್ ಪರಿಣಾಮ ಎಲ್ಲರ ಮನೆಯಲ್ಲಿ ನೀರು ನುಗ್ಗಿದ ಪರಿಣಾಮ ಇಂತಹ ಮಳೆಯಲ್ಲೂ ಜನರು ಬೀದಿಯಲ್ಲಿ ನಿಲ್ಲುವಂತಾಯಿತು. ಜನರು ಈ ಹೊತ್ತಲ್ಲಿ ಪಾಲಿಕೆ ಮೊರೆ ಹೋಗುವುದು ಸಾಮಾನ್ಯ. ಆದರೆ, ಪಾಲಿಕೆ ಹೆಲ್ಪ್ ಲೈನ್ ಲಭ್ಯವಿಲ್ಲ, ಅಧಿಕಾರಿಗಳು ಫೋನ್ ತೆಗೆಯುವುದಿಲ್ಲ. ಇಂತಹ ಅವೈಜ್ಞಾನಿಕ ಕಾಮಗಾರಿ,ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸ್ಪಂದಿಸದ ಕೆಟ್ಟ ಆಡಳಿತ ವ್ಯವಸ್ಥೆ ವಿರುದ್ಧ ಅಲ್ಲಿನ ನಿವಾಸಿಗಳು ಪಾಲಿಕೆಗೆ ಹಿಡಿಶಾಪ ಹಾಕಿದರು.